ಹುಬ್ಬಳ್ಳಿ: ವಿಧಾನಸಭಾ ಚುನಾವಣೆ ಸಮೀಪಿಸುತಿದ್ದಂತೆ ಆಡಳಿತ ಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಬಿಜೆಪಿ ನಾಯಕರಲ್ಲಿಯೇ ಭಿನ್ನಮತವಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಖರ್ಗೆ ಹೇಳಿಕೆಗೆ ತಿರುಗೇಟು ನೀಡಿರುವ ಆರೋಗ್ಯ ಸಚಿವ ಡಾ.ಸುಧಾಕರ್, ಬಿಜೆಪಿ ಬಗ್ಗೆ ಮಾತನಾಡಲು ಕಾಂಗ್ರೆಸ್ ಗೆ ನೈತಿಕತೆ ಇಲ್ಲ ಎಂದಿದ್ದಾರೆ.
ಬಿಜೆಪಿ ಮನೆಯೊಂದು ನೂರು ಬಾಗಿಲಿನಂತಾಗಿದೆ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದರು. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಸಚಿವ ಸುಧಾಕರ್, ಬಿಜೆಪಿಗೆ ಒಂದೇ ಮನೆ. ಯಡಿಯೂರಪ್ಪ ಪ್ರಶ್ನಾತೀತ ನಾಯಕ. ಇದನ್ನು ಸಹಿಸದೇ ವಿಪಕ್ಷದವರು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಎರಡು ಸ್ಟೇರಿಂಗ್ ಇರುವ ಬಸ್. ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗಿಲ್ಲ. ಬಿಎಸ್ ವೈ, ಬೊಮ್ಮಾಯಿ ಹಾಲು-ಜೇನಿನಂತೆ ಕೆಲಸ ಮಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಅವರು ಅಧ್ಯಕ್ಷರಾಗಿದ್ದಕ್ಕೆ ಯಾರೊಬ್ಬರಿಗೂ ಸಹಜ ಸಂತೋಷವಿಲ್ಲ. ಕಾಂಗ್ರೆಸ್ ನಲ್ಲಿ ಮೂರು ಬಾಗಿಲುಗಳಿವೆ. ದೆಹಲಿಯಲ್ಲಿ ಕಾಂಗ್ರೆಸ್ ನ ಒಂದು ಬಾಗಿಲು, ರಾಮನಗರದಲ್ಲಿ ಒಂದು, ಮೈಸೂರಿನಲ್ಲಿ ಒಂದು ಬಾಗಿಲುಗಳಿವೆ ಎಂದು ವಾಗ್ದಾಳಿ ನಡೆಸಿದರು.