ಮುಂಬೈ: ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವುದು ಕಾಂಗ್ರೆಸ್ ಪಕ್ಷದ ಗುರಿ, 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ನಮ್ಮ ಸಮೀಕ್ಷೆಯೂ ನಿರೀಕ್ಷೆಯಂತೆಯೇ ಇದೆ. ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಏನೇ ಹೇಳಲಿ ಸ್ಪಷ್ಟ ಬಹುಮತದ ಮೂಲಕ ನಾವು ಗೆಲ್ಲುವುದು ಖಚಿತ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾನು ಸಾಮಾಜಿಕ ನ್ಯಾಯ, ಅಹಿಂದ ವರ್ಗ ಮತ್ತು ಬಡವರ ಪರವಾಗಿ ಇರುವವನು, ಸರ್ವರು ಸಮಾನ ಮತ್ತು ನ್ಯಾಯಬದ್ಧ ಅವಕಾಶ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಆಶಯದೊಂದಿಗೆ ನಾನು ಹೋರಾಟ ಮಾಡುತ್ತಾ ಬಂದವನು. ಯಾರು ಏನೇ ಹೇಳಿದರೂ ಈ ವಿಷಯದಲ್ಲಿ ರಾಜಿ ಇಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಒಂದೊಂದು ಕ್ಷೇತ್ರದಲ್ಲಿ ನಮ್ಮ ಪಕ್ಷದಿಂದ 10-12 ಗೆಲ್ಲುವ ಅಭ್ಯರ್ಥಿಗಳಿದ್ದಾರೆ. ಇದೇ ಸಮಸ್ಯೆಯಾಗಿದೆ. ಈ ಸಮಸ್ಯೆ ಬಿಜೆಪಿಗೆ ಇಲ್ಲ. ಅದು ನಮ್ಮಂತೆ ಇಡೀ ರಾಜ್ಯದಲ್ಲಿ ನೆಲೆ ಇರುವ ಪಕ್ಷ ಅಲ್ಲ. ಇದಕ್ಕಾಗಿ ನಮ್ಮಲ್ಲಿ ಗೆದ್ದವರನ್ನು ಆಪರೇಷನ್ ಕಮಲ ಮಾಡಿ ಬಿಜೆಪಿಯವರು ಹೊತ್ತುಕೊಂಡು ಹೋಗುತ್ತಾರೆ ಎಂದು ಸರಣಿ ಟ್ವೀಟ್ ಮೂಲಕ ಗುಡುಗಿದ್ದಾರೆ.
ಬಿಜೆಪಿಗೆ ಅಭ್ಯರ್ಥಿಗಳ ಕೊರತೆ ಖಂಡಿತಾ ಇದೆ. ಉದಾಹರಣೆಗೆ ಹುಣಸೂರಿನಲ್ಲಿ ಬಿಜೆಪಿಗೆ ಅಭ್ಯರ್ಥಿ ಯಾರು? ವಿಶ್ವನಾಥ್ ಈಗ ಪರಿಷತ್ ಸದಸ್ಯರಾಗಿದ್ದಾರೆ. ಕೆ.ಆರ್ ನಗರದಲ್ಲಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿ ಯಾರಿದ್ದಾರೆ? ಇಡೀ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ಅಭ್ಯರ್ಥಿಗಳೇ ಇಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಹಲವು ನಾಯಕರು ನನ್ನ ಸಂಪರ್ಕದಲ್ಲಿರುವುದು ನಿಜ. ಚುನಾವಣೆಗೆ 9 ತಿಂಗಳು ಇದೆ, ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತದಲ್ಲಿ ನಂಬಿಕೆ ಇಟ್ಟು, ಪಕ್ಷದ ನಾಯಕತ್ವ ಒಪ್ಪಿಕೊಂಡು, ಪಕ್ಷಕ್ಕೆ ನಿಷ್ಠಾವಂತರಾಗಿ ಇರುವವರಿಗೆ ಟಿಕೇಟ್ ನೀಡುತ್ತೇವೆ. ಬಿಜೆಪಿಯಲ್ಲಿರುವವರೆಲ್ಲರೂ ಆರ್.ಎಸ್.ಎಸ್ ಮೂಲದವರಲ್ಲ, ಉದಾಹರಣೆಗೆ ಸಚಿವ ಎಸ್.ಟಿ.ಸೋಮಶೇಖರ್ ಆರ್.ಎಸ್.ಎಸ್ ನವರಲ್ಲ. ಹೀಗೆ ಬಹಳ ಮಂದಿ ಇದ್ದಾರೆ. ಇದರ ಅರ್ಥ ಸೋಮಶೇಖರ್ ಮರಳಿ ಬರುತ್ತಾರೆ ಎಂದಲ್ಲ. ಕಾಂಗ್ರೆಸ್ ಸಿದ್ಧಾಂತ ಒಪ್ಪಿಕೊಂಡು ಬರುವವರಿಗೆ ಸ್ವಾಗತ ಎಂದು ಆಹ್ವಾನ ನೀಡಿದ್ದಾರೆ.