ಕೊಪ್ಪಳ: ಬಿಜೆಪಿಯ ವಿರುದ್ಧ ಮತ್ತೆ ಕಿಡಿಕಾರಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಿಜೆಪಿಯ ಗುಲಾಮಗಿರಿಗೆ ಸೆಡ್ಡು ಹೊಡೆದು ಬಂದಿದ್ದೇನೆ ಎಂದು ಗುಡುಗಿದ್ದಾರೆ.
ಕೊಪ್ಪಳದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಜಗದೀಶ್ ಶೆಟ್ಟರ್, ಬಿಜೆಪಿ ನಾಯಕರು ನನ್ನನ್ನು ಸೋಲಿಸುವುದಾಗಿ ಹೇಳುತ್ತಿದ್ದಾರೆ. ಶೆಟ್ಟರ್ ಅವರನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಹುಬ್ಬಳ್ಳಿ ಜನರು ನನ್ನ ಜೊತೆಗಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಒಂದು ಮಾತು ಹೇಳಿದ್ದರು. ಶೆಟ್ಟರ್ ಅವರೆ ನೀವು ಭ್ರಷ್ಟಾಚಾರಿ ಅಲ್ಲ, ಅದಕ್ಕೆ ಬಿಜೆಪಿ ಟಿಕೆಟ್ ಕೊಟ್ಟಿಲ್ಲ ಎಂದು. ನನ್ನ ವಿರುದ್ಧ ಕಳಂಕ ಇರಲಿಲ್ಲ. ಹಾಗಾಗಿ ಬಿಜೆಪಿ ಟಿಕೆಟ್ ಕೊಡಲಿಲ್ಲ. ಬಿಜೆಪಿಯ ಗುಲಾಮಗಿರಿಯನ್ನು ನಾನು ಒಪ್ಪಲಿಲ್ಲ. ಹಾಗಾಗಿ ನನ್ನ ವಿರುದ್ಧ ಷಡ್ಯಂತ್ರ ನಡೆಸಿ ಪಕ್ಷದಿಂದ ಹೊರಹಾಕಲು ಸಂಚು ರೂಪಿಸಿದರು ಎಂದು ವಾಗ್ದಾಳಿ ನಡೆಸಿದ್ದಾರೆ.
ಶೆಟ್ಟರ್ ಗೆದ್ದರೆ ಬೆಳೆಯುತ್ತೇನೆ ಎಂಬ ಕಾರಣಕ್ಕೆ ಟಿಕೆಟ್ ಕೈತಪ್ಪಿಸಲು ಹುನ್ನಾರ ನಡೆಸಿದರು. 6 ಬಾರಿ ಗೆಲ್ಲಿಸಿದ ಕ್ಷೇತ್ರದ ಜನರ ಸ್ವಾಭಿಮಾನಕ್ಕೆ ಧಕ್ಕೆಯಾಯ್ತು. ಸ್ವಾಭಿಮಾನಕ್ಕೆ ಧಕ್ಕೆಯಾದರೆ ಅದು ಗುಲಾಮಗಿರಿ ಸಂಕೇತವಾಗುತ್ತೆ. ಬಿಜೆಪಿಯವರ ಗುಲಾಮಗಿರಿ ನಾನು ಒಪ್ಪಲಿಲ್ಲ. ಗುಲಾಮಗಿರಿಗೆ ಸೆಡ್ಡುಹೊಡೆದು ಬಂದಿದ್ದೇನೆ. ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ಕಾಂಗ್ರೆಸ್ ನನ್ನನ್ನು ಗೌರವಯುತವಾಗಿ ನಡೆಸಿಕೊಂಡರೆ ಸಾಕು ಎಂದರು.