ಮೈಸೂರು: ಇಡೀ ಕಾಂಗ್ರೆಸ್ ಪಕ್ಷವೇ ಬೇಲ್ ಮೇಲೆ ಇದೆ ಎಂಬ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿಯಲ್ಲಿ ಯಾರೂ ಬೇಲ್ ಮೇಲೆ ಇಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನ ಎಲ್ಲರೂ ಬೇಲ್ ಮೇಲೆ ಹೊರಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದ ಸಿಎಂ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲಿ ಯಾವ ನಾಯಕರೂ ಬೇಲ್ ಮೇಲೆ ಇಲ್ವಾ? ಅಮಿತ್ ಶಾ ಜೈಲಿಗೆ ಹೋಗಿಲ್ವಾ? ಯಡಿಯೂರಪ್ಪ, ಸಚಿವ ಸೋಮಣ್ಣ ಇವರೆಲ್ಲ ಬೇಲ್ ಮೇಲೆ ಇಲ್ವಾ? ಬಿಜೆಪಿ ತಟ್ಟೆಯಲ್ಲಿಯೇ ಹೆಗ್ಗಣ ಬಿದ್ದಿದೆ. ಆದರೂ ನಮ್ಮ ತಟ್ಟೆಯಲ್ಲಿ ನೊಣ ಹುಡುಕುತ್ತಿದ್ದಾರೆ ಎಂದು ಕಿಡಿಕಾರಿದರು.
ಭ್ರಷ್ಟ ಬಿಜೆಪಿ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ನಕಲಿ ಗಾಂಧಿಗಳ ಬಗ್ಗೆ ಮಾತನಾಡಲ್ಲ ಎಂಬ ಸಿಎಂ ಹೇಳಿಕೆಗೂ ಕೌಂಟರ್ ನೀಡಿರುವ ಸಿದ್ದರಾಮಯ್ಯ, ಗಾಂಧಿ ಕೊಂದವರಿಂದ ಇಂತಹ ಮಾತು ಕೇಳಬೇಕಾ? ಇದೆಂತಹ ವಿಪರ್ಯಾಸ ನೋಡಿ….ಗಾಂಧಿ ಕೊಂದವರು ಯಾರು? ಗೋಡ್ಸೆ… ಅಂತಹ ಗೋಡ್ಸೆಯನ್ನು ಮೆರವಣಿಗೆ ಮಾಡುವವರು ಬಿಜೆಪಿಯವರು. ಅಂತವರಿಂದ ಈ ಮಾತು ಕೇಳಬೇಕಾ? ಸಿಎಂ ಬೊಮ್ಮಾಯಿ ಅವರಿಗೆ ಗಾಂಧಿ ಬಗ್ಗೆಯೂ ಗೊತ್ತಿಲ್ಲ, ಗೋಡ್ಸೆ ಬಗ್ಗೆಯೂ ಗೊತ್ತಿಲ್ಲ, ಸಾವರ್ಕರ್ ಬಗ್ಗೆಯೂ ಗೊತ್ತಿಲ್ಲ. ನಕಲಿ ಗಾಂಧಿವಾದಿಗಳು ಎಂದು ಗುಡುಗಿದ್ದಾರೆ.