ಬೆಂಗಳೂರು : ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಸಿಸಿಬಿ ಪೊಲೀಸರು ಅತಿದೊಡ್ಡ ಡ್ರಗ್ಸ್ ದಾಳಿ ನಡೆಸಿದ್ದು, ಬರಬ್ಬೋರಿ 21 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಜಪ್ತಿ ಮಾಡಲಾಗಿದೆ.
ಹೊಸ ವರ್ಷದ ಪಾರ್ಟಿಗಳಿಗೆ ಪೂರೈಸಲು ವಿದೇಶಿ ಡ್ರಗ್ ಪೆಡ್ಲರ್ ಒಬ್ಬ ಬೆಂಗಳೂರಿನಲ್ಲಿ ಸಂಗ್ರಹಿಸಿದ್ದ ಡ್ರಗ್ಸ್ ನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲೇ ದೊಡ್ಡ ಡ್ರಗ್ಸ್ ಕಾರ್ಯಾಚರಣೆಯಾಗಿದೆ.
ರಾಮಮೂರ್ತಿ ನಗರದ ಲಿಯೋನಾರ್ಡ್ ಓಕ್ವುಡಿಲಿ ಬಂಧಿತ ಆರೋಪಿಯಾಗಿದ್ದು, ಆರೋಪಿಯಿಂದ 16 ಕೆಜಿ ತೂಕದ ಎಂಡಿಎಂಎ ಕ್ರಿಸ್ಟಲ್, 500 ಗ್ರಾಂ ಕೋಕೆನದ, ಮೂರು ಮೊಬೈಲ್ ಹಾಗೂ ಮೂರು ಎಲೆಕ್ಟ್ರಾನಿಕ್ ತೂಕದ ಯಂತ್ರಗಳು ಸೇರಿದಂತೆ ಒಟ್ಟು 21 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವರ್ಷದಿಂದ ಡ್ರಗ್ಸ್ ದಂಧೆಯಲ್ಲಿ ಲಿಯೋ ತೊಡಗಿದ್ದು, ಈತನ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಕಾರ್ಯಾಚರಣೆ ನಡೆಸಿದೆ ಎಂದು ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ.