ಬೆಂಗಳೂರು : ಕೈ ಕಾಲು ಕತ್ತರಿಸಿ ಬಿಜೆಪಿ ಕಾರ್ಯಕರ್ತೆಯ ಬರ್ಬರ ಹತ್ಯೆ ಮಾಡಿದ ಘಟನೆ ಕೆ ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಗಳು ಶವವನ್ನು ಡ್ರಮ್ ನಲ್ಲಿ ತುಂಬಿಸಿಟ್ಟು ಪರಾರಿಯಾಗಿದ್ದಾರೆ.
ಕೆ ಆರ್ ಪುರ ಸಮೀಪದ ನಿಸರ್ಗ ಲೇಔಟ್ ನಿವಾಸಿ ಸುಶೀಲಮ್ಮ (76) ಕೊಲೆಯಾದ ವೃದ್ದೆ ಎಂದು ಗುರುತಿಸಲಾಗಿದೆ. ಕಳೆದ 2-3 ದಿನಗಳ ಹಿಂದೆಯೇ ವೃದ್ಧೆಯನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದ್ದು, ಕೊಳೆತ ದೇಹದ ವಾಸನೆ ಬಂದ ಹಿನ್ನೆಲೆ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕೆ.ಆರ್.ಪುರಂ ಪೊಲೀಸರು ಹಾಗೂ ವಿಧಿವಿಜ್ಞಾನ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ವೃದ್ದೆ ಸುಶೀಲಮ್ಮ (76) ಬಿಜೆಪಿ ಕಾರ್ಯಕರ್ತೆಯಾಗಿದ್ದು, ಕಳೆದ ಹಲವು ಚುನಾವಣೆಗಳಲ್ಲಿ ಅವರು ಸ್ಥಳೀಯ ಶಾಸಕರ ಪರ ಪ್ರಚಾರ ನಡೆಸಿ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ಮಕ್ಕಳಿಂದ ಪ್ರತ್ಯೇಕವಾಗಿ ವಾಸವಾಗಿದ್ದ ವೃದ್ದೆಯ ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಹಣಕ್ಕಾಗಿ ವೃದ್ದೆಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ದಿನೇಶ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.