ಬೆಂಗಳೂರು: ಅಧಿವೇಶನ ಆರಂಭವಾಗುವ ಮೊದಲು 5 ಗ್ಯಾರಂಟಿ ಈಡೇರಿಸದಿದ್ದರೆ ಸರ್ಕಾರದ ವಿರುದ್ಧ ಧರಣಿ ಮಾಡುವುದಾಗಿ ಹೇಳಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
15 ಲಕ್ಷ ರೂ. ಗಳನ್ನು ಪ್ರತಿ ಮನೆಗೆ ಕೊಡುತ್ತೇನೆ ಎಂದವರು 9 ವರ್ಷಗಳಾದರೂ ಈಡೇರಿಸಿಲ್ಲ. ಆದಾಯ ದುಪ್ಪಟ್ಟು ಮಾಡುತ್ತೇವೆ, ಅಚ್ಛೇ ದಿನ್ ತಂದು ಕೊಡುತ್ತೇವೆ ಎಂದವರು ಏನೂ ಮಾಡಿಲ್ಲ. ತಾವು ಕೊಟ್ಟ ಭರವಸೆಯನ್ನು ಈವರೆಗೂ ಈಡೇರಿಸಲು ಸಾಧ್ಯವಾಗದವರು ಈಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಧರಣಿ ಮಾಡುವುದಾಗಿ ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬಿಜೆಪಿ ನೀಡಿದ್ದ ಪ್ರಣಾಳಿಕೆಯಲ್ಲಿ ಒಂದು ಲಕ್ಷದವರಿಗಿನ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದ್ದರು. ಹತ್ತು ಗಂಟೆ ವಿದ್ಯುತ್ ನೀಡುತ್ತೇವೆ, ನೀರಾವರಿಗೆ ಒಂದೂವರೆ ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದೆಲ್ಲಾ ಹೇಳಿದ್ದರು. ಆದರೆ ಅವುಗಳನ್ನು ಜಾರಿ ಮಾಡದವರು ಈಗ ಧರಣಿ ಕುಳಿತುಕೊಳ್ಳುವುದಾಗಿ ಹೇಳುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.