ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದ್ದಾರೆ.
ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಸಿಎಂ ಬೊಮ್ಮಾಯಿ, ಹಿರಿಯ ಸಾಹಿತಿ ದೊಡ್ಡರಂಗೇಗೌಡರ ಸರ್ವಾಧ್ಯಕ್ಷತೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ದೊಡ್ದರಂಗೇಗೌಡರು ತಮ್ಮ ಹೆಸರಿನಷ್ಟೇ ದೊಡ್ದ ಸಾಹಿತಿಗಳು. ಜನಸಾಮಾನ್ಯರಿಗೆ ಸರಳ ಭಾಷೆಯಲ್ಲಿ ಸಾಹಿತ್ಯವನ್ನು ಮಾರ್ಮಿಕವಾಗಿ ತಿಳಿಸಿದವರು ಎಂದು ಹೇಳಿದರು.
ಕನ್ನಡ ಇಡೀ ಜಗತ್ತಿನಲ್ಲಿಯೇ ಅತ್ಯಂತ ಪ್ರಾಚೀನ ಭಾಷೆ. ಕನ್ನಡ ಸಂಸ್ಕೃತಿ ಬಹುದೊಡ್ಡ ಚರಿತ್ರೆ ಹೊಂದಿದೆ. ಕನ್ನಡದ ಸಂಸ್ಕೃತಿಯಲ್ಲಿ ಸಾಹಿತ್ಯದ ಪಾತ್ರ ಬಹಳ ದೊಡ್ಡದಿದೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಸಮ್ಮೇಳನದ ಮೇಲಿದೆ. ಕನ್ನಡದ ಕಿಚ್ಚು ಹೆಚ್ಚಿಸಬೇಕಿದೆ ಎಂದು ಕರೆ ನೀಡಿದರು.
ಕನ್ನಡಕ್ಕಾಗಿ ಕೆಲಸ ಮಾಡಬೇಕಾದ ಸಮಯವಿದು. ಭಾಷೆ, ಸಂಸ್ಕೃತಿ ಬೆಳೆಯಲು ನಡೆದುಬಂದ ದಾರಿ ಸಿಂಹಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ಪಾತ್ರ ಏನಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.