ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣ ಪ್ರಯಾಣಿಕರಿಂದಲೇ ತುಂಬಿ ಹೋಗಿದೆ. ಜರ್ಮನಿಯ ಫ್ಲ್ಯಾಗ್ ಕ್ಯಾರಿಯರ್ ಲುಫ್ಥಾನ್ಸಾ ವಿಮಾನಯಾನ ಸಂಸ್ಥೆ ಪೈಲಟ್‌ಗಳ ಒಂದು ದಿನದ ಮುಷ್ಕರದಿಂದಾಗಿ ಜಾಗತಿಕವಾಗಿ 800 ವಿಮಾನಗಳನ್ನು ರದ್ದುಗೊಳಿಸಿದೆ. ಇದರಿಂದಾಗಿ ದೆಹಲಿಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಜಮಾಯಿಸಿದ್ದಾರೆ.
ಐಜಿಐ ವಿಮಾನ ನಿಲ್ದಾಣದ ಟಿ3 ಟರ್ಮಿನಲ್‌ನಲ್ಲಿ ಸುಮಾರು 700 ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. ದೆಹಲಿಯಿಂದ ಲುಫ್ಥಾನ್ಸ ವಿಮಾನಯಾನ ಸಂಸ್ಥೆಯು ಫ್ರಾಂಕ್‌ಫರ್ಟ್ ಮತ್ತು ಮ್ಯೂನಿಚ್‌ಗೆ ಎರಡು ವಿಮಾನಗಳು ಹೊರಡಬೇಕಿತ್ತು. ಮಧ್ಯರಾತ್ರಿ 12.15ಕ್ಕೆ ವಿಮಾನ ಹಾರಾಟ ರದ್ದಾಗಿರುವುದಾಗಿ ಮಾಹಿತಿ ಬಂದಿದೆ. ದಿಢೀರನೆ ವಿಮಾನ ರದ್ದಾಗಿದ್ದರಿಂದ ಕಂಗಾಲಾದ ಪ್ರಯಾಣಿಕರು ಡಿಪಾರ್ಚರ್ ಗೇಟ್ ಎದುರು ಜಮಾಯಿಸಿದ್ದರು.
ಸ್ಥಳದಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಯ್ತು. ಹಣ ಮರುಪಾವತಿ ಮಾಡಿ ಅಥವಾ ಪರ್ಯಾಯ ವ್ಯವಸ್ಥೆಯನ್ನು ಮಾಡುವಂತೆ ಪ್ರಯಾಣಿಕರು ಒತ್ತಾಯಿಸಿದ್ದಾರೆ. ಲುಫ್ಥಾನ್ಸ್ ವಿಮಾನದ ಮೂಲಕ ದೆಹಲಿಯಿಂದ ಫ್ರಾಂಕ್‌ಫರ್ಟ್‌ಗೆ 300 ಪ್ರಯಾಣಿಕರು ತೆರಳಬೇಕಿತ್ತು. ದೆಹಲಿಯಿಂದ ಮ್ಯೂನಿಚ್‌ಗೆ ಸುಮಾರು 400 ಪ್ರಯಾಣಿಕರು ತೆರಳಲು ಸಜ್ಜಾಗಿದ್ದರು. ಆದ್ರೆ ಆ ಎರಡೂ ವಿಮಾನಗಳು ರದ್ದಾಗಿವೆ. ನಿಲ್ದಾಣದಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರಯಾಣಿಕರು ಜಮಾಯಿಸಿದ್ದರಿಂದ ಭದ್ರತೆಯ ಆತಂಕ ಸಹ ಎದುರಾಗಿತ್ತು.
ಯಾವುದೇ ಪೂರ್ವ ಸೂಚನೆಯಿಲ್ಲದೆ ವಿಮಾನಗಳನ್ನು ರದ್ದುಗೊಳಿಸಿದ್ದರಿಂದ ಪ್ರಯಾಣಿಕರು ಮತ್ತವರ ಸಂಬಂಧಿಕರು ಆಕ್ರೋಶಗೊಂಡಿದ್ದರು. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಐಜಿಐ ವಿಮಾನ ನಿಲ್ದಾಣದ ಡಿಸಿಪಿ ತನು ಶರ್ಮಾ ತಿಳಿಸಿದ್ದಾರೆ. ಲುಫ್ಥಾನ್ಸ ವಿಮಾನದ ಮೂಲಕ ಪ್ರಯಾಣಿಸಬೇಕಿದ್ದವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು.