ಶಿವಮೊಗ್ಗ: 7ನೇ ವೇತನ ಆಯೋಗ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಮಾರ್ಚ್ 1ರಿಂದ ಅನಿರ್ದಿಷ್ಟಾವಧಿ ಧರಣಿಗೆ ನಿರ್ಧರಿಸಿದ್ದಾರೆ ಎಂದು ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಸ್. ಷಡಕ್ಷರಿ, ಸಿಎಂ ಬಸವರಾಜ್ ಬೊಮ್ಮಾಯಿ ಅವರ ಧೋರಣೆಯಿಂದ ರಾಜ್ಯದ 9 ಲಕ್ಷ ನೌಕರರಿಗೆ ಬೇಸರವಾಗಿದೆ. ಶಾಲೆ, ಕಾಲೇಜು, ಆಸ್ಪತ್ರೆ ಸೇರಿದಂತೆ ಎಲ್ಲಾ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರಾಗುವ ಮೂಲಕ ಧರಣಿ ನಡೆಸುತ್ತೇವೆ ಎಂದು ತಿಳಿಸಿದರು.
ಸಿಎಂ ಬೊಮ್ಮಾಯಿ ಅವರು ಸರ್ಕಾರಿ ನೌಕರರ ಬಗ್ಗೆ ಉದಾಸೀನತೆ ತೋರಿದ್ದಾರೆ. 7ನೇ ವೇತನ ಆಯೋಗದ ಶಿಫಾರಸ್ಸನ್ನು ಮಧ್ಯಂತರ ಆದೇಶ ಹೊರಡಿಸಬೇಕು. ಆಗ ಮಾತ್ರ ನಮ್ಮ ಹೋರಾಟ ಕೈಬಿಡುತ್ತೇವೆ. ಇಲ್ಲವಾದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುವುದು ಖಚಿತ. ಇನ್ನೂ ಮೂರ್ನಾಲ್ಕು ದಿನ ಬಾಕಿ ಇದೆ. ಅಷ್ಟರಲ್ಲಿ ಸರ್ಕಾರ ಒಳ್ಳೆಯ ನಿರ್ಧಾರ ಪ್ರಕಟಿಸಲಿ ಎಂದು ಎಚ್ಚರಿಕೆ ನೀಡಿದ್ದಾರೆ.