ಬೆಂಗಳೂರು: ರಾಜ್ಯ ಸರ್ಕಾರ ಉದ್ಯೋಗ ಸೃಷ್ಟಿಯ ಬಗ್ಗೆ ಸುಳ್ಳು ಜಾಹೀರಾತುಗಳನ್ನು ಪ್ರಕಟಿಸುವ ಮೂಲಕ ಜಾಹೀರಾತಿನ ಮೂಲಕ ಸುಳ್ಳು ಮಾರಾಟ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸುವುದರ ಬದಲಿಗೆ ನಿರುದ್ಯೋಗವನ್ನು ಸೃಷ್ಟಿಸಿದೆ. ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳಿಗೆ ಒಂದು ಗುಲಗಂಜಿಯಷ್ಟಾದರೂ ನಾಚಿಕೆ ಇದೆಯೆ ಎಂದು ಅನುಮಾನವಾಗಿದೆ. ಜನರ ತೆರಿಗೆ ಹಣವನ್ನು ಬಳಸಿ ಜಾಹಿರಾತುಗಳ ಮೂಲಕ ಸುಳ್ಳು ಹೇಳುತ್ತಿದೆ. ಕೋಟಿಗಟ್ಟಲೆ ವೆಚ್ಚದ ಜಾಹಿರಾತುಗಳನ್ನು ಪ್ರತಿನಿತ್ಯ ಬಿಡುಗಡೆ ಮಾಡಲಾಗುತ್ತಿದೆ. ಯುಗಾದಿಯ ದಿನ ಬಿಡುಗಡೆ ಮಾಡಿರುವ ಜಾಹಿರಾತಿನಲ್ಲಿ 68.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಹೇಳಿಕೊಂಡಿದೆ. ಹಾಗಿದ್ದರೆ ವಾಸ್ತವದಲ್ಲಿ ನಿರುದ್ಯೋಗ ಕಡಿಮೆಯಾಗಬೇಕಿತ್ತಲ್ಲ? ಆಗಿದೆಯಾ? ಎಲ್ಲಿ ಹುಡುಕಿದರೂ ಉದ್ಯೋಗ ಸಿಗುತ್ತಿಲ್ಲವೆಂದು ಲಕ್ಷಾಂತರ ಯುವಜನರು ಉದ್ಯೋಗ ಹುಡುಕುವುದನ್ನೆ ನಿಲ್ಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂಐಇ ಸಂಸ್ಥೆ ಪ್ರತಿ ದಿನದ ನಿರುದ್ಯೋಗದ ಪ್ರಮಾಣವನ್ನು ಬಿಡುಗಡೆ ಮಾಡುವ ಜತೆಗೆ ಹಾಗೂ ಪ್ರತಿ ಮೂರು ತಿಂಗಳಿಗೊಮ್ಮೆ ಸಮಗ್ರವಾದ ಉದ್ಯೋಗ ಮತ್ತು ನಿರುದ್ಯೋಗದ ಚಿತ್ರಣಗಳನ್ನು ನೀಡುತ್ತದೆ. ಸಂಸ್ಥೆಯು ಬಿಡುಗಡೆ ಮಾಡಿರುವ ದಾಖಲೆಗಳನ್ನು ನೋಡಿದರೆ ರಾಜ್ಯದ ನಿರುದ್ಯೋಗದ ಪ್ರಮಾಣ ಭಯ ಹುಟ್ಟಿಸುತ್ತದೆ. ಕರ್ನಾಟಕದ ಜನಸಂಖ್ಯೆಯಲ್ಲಿ ಒಟ್ಟು ದುಡಿಮೆ ಮಾಡಲು ಬಯಸುವವರ ಸಂಖ್ಯೆ 2.49 ಕೋಟಿ ಎಂದು ಅಂದಾಜು ಮಾಡಿದ್ದಾರೆ. ಆದರೆ, ಯಾವುದೊ ಒಂದು ಉದ್ಯೋಗ ಲಭಿಸಿರುವುದು ಕೇವಲ 2.1 ಕೋಟಿ ಜನರಿಗೆ ಮಾತ್ರ. ಸುಮಾರು 30 ಲಕ್ಷ ಜನರಿಗೆ ಯಾವ ಉದ್ಯೋಗವೂ ಇಲ್ಲದೆ ಪರದಾಡುತ್ತಿದ್ದಾರೆ. ಹೀಗಿರುವಾಗ ಸರ್ಕಾರ ಸುಳ್ಳು ಜಾಹೀರಾತು ನೀಡಿದೆ. 67.9 ಲಕ್ಷ ಉದ್ಯೋಗ ಸೃಷ್ಟಿಸಿದ್ದೇವೆ ಎಂದು ಹೇಳಿಕೆ ನೀಡುವವರು ಯಾವ ಯಾವ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಮಾಡಿದ್ದೇವೆ ಎಂದೂ ಸಹ ಹೇಳಬೇಕಲ್ಲ? ಈ ಕುರಿತು ಅಧಿಕೃತ ದಾಖಲೆಗಳನ್ನು ಬಿಡುಗಡೆ ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.