ಧಾರವಾಡ: ಸಿಎಂ ಯಡಿಯೂರಪ್ಪ ಪರ 65 ಶಾಸಕರು ಸಹಿ ಸಂಗ್ರಹಿಸಿದ್ದೇವೆ ಎಂಬ ಶಾಸಕ ರೇಣುಕಾಚಾರ್ಯ ಹೇಳಿಕೆ ಬೆನ್ನಲ್ಲೇ ಹೊಸ ಬಾಂಬ್ ಸಿಡಿಸಿರುವ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್, ಅಂತಹ ಯಾವುದೇ ಸಹಿ ಸಂಗ್ರಹ ಮಾಡಿಲ್ಲ. ಹಿಂದೆ ಮಾಡಿದ್ದ ಸಹಿಯನ್ನು ಈಗ ಬೇರೆ ಉದ್ದೇಶಕ್ಕೆ ಬಳಸಿಕೊಂಡಿರಬೇಕು ಎಂದಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊದಿಗೆ ಮಾತನಾಡಿದ ಅರವಿಂದ್ ಬೆಲ್ಲದ್, ಸಿಎಂ ಪರವಾಗಿಯಾಗಲಿ ಅಥವಾ ವಿರೋಧವಾಗಿಯಾಗಲಿ ಈಗ ಯಾವುದೇ ಸಹಿ ಸಂಗ್ರಹವನ್ನೂ ಮಾಡಿಲ್ಲ. ಈ ಹಿಂದೆ ಸಚಿವ ಈಶ್ವರಪ್ಪನವರ ಗ್ರಾಮೀಣಾಭಿವೃದ್ಧಿ ಇಲಾಖೆ ಹಣ ಬಿಡುಗಡೆ ಬಗ್ಗೆ 65 ಶಾಸಕರ ಸಹಿ ಸಂಗ್ರಹ ಮಾಡಲಾಗಿತ್ತು. ಬಹುಶ: ಶಾಸಕರ ಆ ಸಹಿ ಇರುವ ಪತ್ರವನ್ನು ಈಗ ಬೇರೆ ಉದ್ದೇಶಗಳಿಗೆ ಉಪಯೋಗಿಸಿಕೊಂಡಿರಬಹುದು ಹೊರತು ನಾವು ಯಾವುದೇ ಸಹಿ ಮಾಡಿಲ್ಲ ಎಂದು ಹೇಳಿದ್ದಾರೆ.
ಶಾಸಕಾಂಗ ಸಭೆ ಮಾಡಿದಾಗ ಮಾತ್ರ ಎಲ್ಲಾ ವಿಚಾರಗಳು ಗೊತ್ತಾಗುತ್ತೆ. ಸಹಿ ಸಂಗ್ರಹದ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತದೆ ಎಂದು ಹೇಳಿದರು. ಒಟ್ಟಾರೆ ಸಿಎಂ ಪರ 65 ಶಾಸಕರ ಸಹಿ ಸಂಗ್ರಹ ಎಂಬ ರೇಣುಕಾಚಾರ್ಯ ಹೇಳಿಕೆ ಬೆನ್ನಲ್ಲೇ ಶಾಸಕರ ಈ ಹೇಳಿಕೆ ಮಹತ್ವ ಪಡೆದುಕೊಂಡಿದ್ದು, ಬೇರೆ ಕಾರಣಗಳಿಗೆ ಸಹಿ ಮಾಡಿಕೊಂಡು ಲೆಕ್ಕ ಕೊಟ್ಟರೇ ಎಂಬ ಅನುಮಾನ ಶುರುವಾಗಿದೆ.