1962ರಲ್ಲಿ ನಡೆದ ಕೆರಿಬಿಯನ್ ಪ್ರವಾಸದ ವೇಳೆಯಲ್ಲಿ ಚಾರ್ಲಿ ಗ್ರಿಫಿತ್ ಬೌನ್ಸರ್ನಿಂದ ಬಡಿಸಿಕೊಂಡ ಬಳಿಕ ತಲೆ ಫ್ರಾಕ್ಚರ್ಗೆ ಒಳಗಾಗಿದ್ದ ಟೀಂ ಇಂಡಿಯಾ ಮಾಜಿ ಬ್ಯಾಟ್ಸಮನ್ ನಾರಿ ಕಂಟ್ರಾಕ್ಟರ್ ತಲೆಯಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬರೋಬ್ಬರಿ 60 ವರ್ಷಗಳ ಬಳಿಕ ವೈದ್ಯಕೀಯ ಸಲಹೆಯ ಮೇರೆಗೆ ಮುಂಬೈ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯ ಮೂಲಕ ಅವರ ತಲೆಯಲ್ಲಿದ್ದ ಲೋಹದ ತಟ್ಟೆಯನ್ನು ತೆಗೆದು ಹಾಕಲಾಗಿದೆ.
ಈ ಬಗ್ಗೆ ಕಂಟ್ರಾಕ್ಟರ್ ಪುತ್ರ ಹೊಶೆದೆರ್ ಮಾಹಿತಿ ನೀಡಿದ್ದು ಶಸ್ತ್ರಚಿಕಿತ್ಸೆಯ ಬಳಿಕ ತಂದೆಯ ಆರೋಗ್ಯ ಸುಧಾರಿಸಿದ್ದು ಅವರು ಶೀಘ್ರದಲ್ಲಿಯೇ ಮನೆಗೆ ಮರಳಲಿದ್ದಾರೆ ಎಂದು ಹೇಳಿದರು.
ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿದೆ ಹಾಗೂ ನಾರಿ ಶೀಘ್ರದಲ್ಲಿಯೇ ಗುಣಮುಖರಾಗಲಿದ್ದಾರೆ. ಅವರು ಇನ್ನೂ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಲಿದ್ದಾರೆ. ವೈದ್ಯರ ಸಲಹೆಯನ್ನು ಆಲಿಸಿ ಬಳಿಕ ಅವರನ್ನು ನಾವು ಮನೆಗೆ ಕರೆದುಕೊಂಡು ಹೋಗಲಿದ್ದೇವೆ ಎಂದು ಹೊಶೆದೆರ್ ಹೇಳಿದ್ದಾರೆ.
88 ವರ್ಷ ಪ್ರಾಯದ ಕಂಟ್ರಾಕ್ಟರ್ 31 ಟೆಸ್ಟ್ಗಳಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. 138 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. ಈ ಗಾಯದ ಬಳಿಕ ಇವರ ಅಂತಾರಾಷ್ಟ್ರೀಯ ವೃತ್ತಿ ಜೀವನ ಕೊನೆಗೊಂಡಿತ್ತು. ಬಳಿಕ ಅವರು ಪ್ರಥಮ ದರ್ಜೆ ಕ್ರಿಕೆಟ್ಗೆ ಮರಳಿದರು. ಬ್ರಿಯಾನ್ ಸ್ಟ್ಯಾಥಮ್ ಬೌಲಿಂಗ್‌ನಿಂದ ಪಕ್ಕೆಲುಬುಗಳು ಮುರಿದಿದ್ದರೂ ಸಹ ಲಾರ್ಡ್ಸ್‌ನಲ್ಲಿ ಕಂಟ್ರಾಕ್ಟರ್ 81 ರನ್ ಗಳಿಸಿದಾಗ ಅವರ ನಿರ್ಣಯ ಮತ್ತು ಧೈರ್ಯವು 1959 ರಲ್ಲಿ ಇಂಗ್ಲೆಂಡ್ ವಿರುದ್ಧ ತಂಡವು ಮಿಂಚುವಂತೆ ಮಾಡಿತು.