ನವದೆಹಲಿ: ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶ ಗುರುವಾರ ಹೊರಬಿದ್ದಿದೆ. ಗುಜರಾತ್ ನಲ್ಲಿ ಐತಿಹಾಸಿಕ ದಾಖಲೆ ಮಾಡಿರುವ ಬಿಜೆಪಿ, ಹಿಮಾಚಲ ಪ್ರದೇಶದಲ್ಲಿ ಹೀನಾಯವಾಗಿ ಸೋಲುಂಡಿದೆ. ವಿವಿಧ ರಾಜ್ಯಗಳ ಉಪ ಚುನಾವಣೆ ಕೂಡ ಇದೇ ಸಮಯದಲ್ಲಿ ನಡೆದಿತ್ತು.
ಹೌದು, ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಹಾಗೂ ಲೋಕಸಭೆ ಉಪ ಚುನಾವಣೆಗಳ ಫಲಿತಾಂಶ ಕೂಡ ಗುರುವಾರವೇ ಹೊರ ಬಿದ್ದಿದೆ. 6 ವಿಧಾನಸಭೆ, 1 ಲೋಕಸಭೆ ಉಪ ಚುನಾವಣೆ ನಡೆದಿತ್ತು. ಇದರಲ್ಲಿ ಬಿಜೆಪಿಗೆ 2 ಗೆಲುವು, 5ರಲ್ಲಿ ಸೋಲಾಗಿದೆ. ಉತ್ತರ ಪ್ರದೇಶದ ಮೈನ್ಪುರಿ ಲೋಕಸಭೆ, ಉತ್ತರ ಪ್ರದೇಶದ ರಾಮಪುರ ಮತ್ತು ಖಟೌಲಿ, ಒಡಿಶಾದ ಪದಂಪುರ, ರಾಜಸ್ಥಾನದ ಸರ್ದಾರಶಹರ್, ಬಿಹಾರದ ಕುರ್ಹಾನಿ ಹಾಗೂ ಛತ್ತೀಸಗಡದ ಭಾನುಪ್ರತಾಪ್ಪುರ್ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದಿತ್ತು.
ಇದರಲ್ಲಿ ಸರ್ದಾರ್‌ಶಹರ್ ಮತ್ತು ಭಾನುಪ್ರತಾಪ್ಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ. ಖಟೌಲಿಯಲ್ಲಿ ಬಿಜೆಪಿ ಮತ್ತು ರಾಮಪುರದಲ್ಲಿ ಎಸ್‌ಪಿ ಅಭ್ಯರ್ಥಿಗಳು ಗೆದ್ದಿದ್ದರು. ಪದಂಪುರ ಬಿಜೆಡಿ ಹಾಗೂ ಕುರ್ಹಾನಿ ಆರ್‌ಜೆಡಿ ತೆಕ್ಕೆಯಲ್ಲಿದ್ದ ಕ್ಷೇತ್ರಗಳಾಗಿವೆ. ಉತ್ತರ ಪ್ರದೇಶದ ಮೈನ್ಪುರಿ ಲೋಕಸಭೆ ಕ್ಷೇತ್ರದಲ್ಲಿ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಗೆದ್ದಿದ್ದಾರೆ.