ಬೆಂಗಳೂರು: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಬಗ್ಗೆ ಮತ್ತೆ ವ್ಯಂಗ್ಯವಾಡಿರುವ ಕಂದಾಯ ಸಚಿವ ಆರ್. ಅಶೋಕ್, ಹಿಂದೆ 6 ವರ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದರು. ಆಗ ಯೋಜನೆಗಾಗಿ ನಯಾಪೈಸೆ ಖರ್ಚು ಮಾಡಿಲ್ಲ ಈಗ ಪಾದಯಾತ್ರೆ ಮೂಲಕ ಗಿಮಿಕ್ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಆರ್. ಅಶೋಕ್, ಮೇಕೆದಾಟಿಗೆ ಕಾಂಗ್ರೆಸ್ ಪಾದಯಾತ್ರೆ ಚುನಾವಣಾ ಗಿಮಿಕ್. 6 ವರ್ಷ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿದ್ದರು. ಆಗ ಏನು ಕಡಲೆಕಾಯಿ ತಿನ್ನುತ್ತಿದ್ದರೇ? ನೀರಾವರಿ ಯೋಜನೆಗಾಗಿ ಒಂದು ನಯಾ ಪೈಸೆ ಹಣ ಮೀಸಲಿಡಲಿಲ್ಲ. ಯೋಜನೆ ಕೂಡ ಮಾಡಲಿಲ್ಲ. ಈಗ ಪಾದಯಾತ್ರೆಯ ನಾಟಕವಾಡುತ್ತಿದ್ದಾರೆ ಎಂದರು.
ನಿಜವಾಗಿ ಕುಡಿಯುವ ನೀರಿನ ಬಗ್ಗೆ ಕಾಳಜಿ ಇದ್ದಿದ್ದರೆ ಅವರು ಅಧಿಕಾರದಲ್ಲಿದ್ದಾಗಲೇ ಯೋಜನೆ ಜಾರಿಗೆ ತರುತ್ತಿದ್ದರು. ಡಿಪಿಆರ್ ಸಿದ್ಧ ಮಾಡುತ್ತಿದ್ದೆವು ಎನ್ನುತ್ತಿದ್ದಾರೆ. ಡಿಪಿಆರ್ ಸಿದ್ಧತೆಗೆ 6 ವರ್ಷ ಬೇಕಾಯಿತಾ? ಯಾವುದಾದರೂ ಏಜನ್ಸಿಗೆ ನೀಡಿದ್ದರೆ ಕೇವಲ 3 ತಿಂಗಳಲ್ಲಿ ಡಿಪಿಆರ್ ಸಿದ್ಧ ಮಾಡಿ ಕೊಡುತ್ತಾರೆ. ಈಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೇಕೆದಾಟು ಯೋಜನೆ ಎಂದು ಮೈ ಪರಚಿಕೊಳ್ಳುತ್ತಿದ್ದಾರೆ. ಇಂತಹ ಗಿಮಿಕ್ ಗಳನ್ನು ಜನರು ನಂಬಲ್ಲ ಎಂದು ವಾಗ್ದಾಳಿ ನಡೆಸಿದರು.