ಕೋವಿಡ್ ಗಂಭೀರ ಲಕ್ಷಣಗಳನ್ನು ಹೊಂದಿದ್ದರೂ ಸಹ 18 ವರ್ಷ ಕೆಳಪಟ್ಟವರಿಗೆ ಆ್ಯಂಟಿವೈರಲ್ ಹಾಗೂ ಮೊನೊಕ್ಲೋನಲ್ ಆ್ಯಂಟಿಬಾಡಿಗಳನ್ನು ಶಿಫಾರಸು ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಮಹತ್ವದ ಮಾಹಿತಿಯನ್ನು ನೀಡಿದೆ.
ಮಕ್ಕಳು ಹಾಗೂ ಕಿಶೋರರ (18 ವರ್ಷಕ್ಕಿಂತ ಕೆಳಪಟ್ಟವರು) ಕೋವಿಡ್ 19 ಮಾರ್ಗಸೂಚಿಗಳನ್ನು ಪರಿಷ್ಕರಣೆಯನ್ನು ಮಾಡಿದ ಕೇಂದ್ರ ಆರೋಗ್ಯ ಸಚಿವಾಲಯವು ಐದು ವರ್ಷಕ್ಕಿಂತ ಕೆಳಪಟ್ಟ ಮಕ್ಕಳಿಗೆ ಫೇಸ್ ಮಾಸ್ಕ್ಗಳನ್ನು ಶಿಫಾರಸು ಮಾಡುವುದಿಲ್ಲ ಎಂದು ಹೇಳಿದೆ.
6 ರಿಂದ 11 ವರ್ಷ ಪ್ರಾಯದ ಮಕ್ಕಳು ಪೋಷಕರ ಮಾರ್ಗದರ್ಶನದಲ್ಲಿ ಮಾಸ್ಕ್ಗಳನ್ನು ಸುರಕ್ಷಿತವಾಗಿ ಹಾಗೂ ಸರಿಯಾದ ರೀತಿಯಲ್ಲಿ ಹಾಕಿಕೊಳ್ಳಬಲ್ಲರೇ ಎಂಬ ಸಾಮರ್ಥ್ಯವನ್ನು ಅವಲಂಬಿಸಿ ಮಾಸ್ಕ್ಗಳನ್ನು ಧರಿಸಬಹುದಾಗಿದೆ ಎಂದು ಕೇಂದ್ರ ಹೇಳಿದೆ.
ಇನ್ನು 12 ವರ್ಷ ಮೇಲ್ಪಟ್ಟ ಮಕ್ಕಳು ಕಡ್ಡಾಯವಾಗಿ ಫೇಸ್ಮಾಸ್ಕ್ಗಳನ್ನು ಧರಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಓಮಿಕ್ರಾನ್ ರೂಪಾಂತರದ ಪ್ರಕರಣಗಳು ಹೆಚ್ಚಾಗುತ್ತಿರುವ ದೇಶದ ಸದ್ಯದ ಪರಿಸ್ಥಿತಿಗಳನ್ನು ಅವಲೋಕನ ಮಾಡಿದ ತಜ್ಞರ ಗುಂಪು ಈ ಮಾರ್ಗಸೂಚಿಗಳಲ್ಲಿ ಬದಲಾವಣೆಯನ್ನು ತಂದಿದೆ ಎನ್ನಲಾಗಿದೆ.
ಇತರೆ ದೇಶಗಳಿಂದ ಲಭ್ಯವಿರುವ ಮಾಹಿತಿಯ ಪ್ರಕಾರ ಓಮಿಕ್ರಾನ್ ರೂಪಾಂತರಿಯು ಕಡಿಮೆ ತೀವ್ರತೆಯನ್ನು ಹೊಂದಿದೆ. ಆದರೂ ಮೂರನೇ ಅಲೆಯು ವಿಕಸನಗೊಳ್ಳುತ್ತಿರುವ ಹಿನ್ನಲೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವುದು ಅವಶ್ಯಕವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.