ರಾಮನಗರ: ಏನಾದರೂ ಮಾಡಿ ಮೇಕೆದಾಟು ಪಾದಯಾತ್ರೆ ತಡೆಯಲೆಬೇಕು ಎಂಬುದು ರಾಜ್ಯ ಸರ್ಕಾರದ ದುರುದ್ದೇಶವಾಗಿದೆ. ಅದೇನೇ ಮಾಡಿದರೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶಪಥ ಮಾಡಿದ್ದಾರೆ.
ರಾಮನಗರ ಜಿಲ್ಲೆಯ ಮಾದಪ್ಪನದೊಡ್ದಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಇಂದಿನಿಂದ 3 ದಿನ ಮೌನವಾಗಿ ನಡೆಯುತ್ತೇವೆ. ಯಾವುದೇ ಪ್ರತಿಕ್ರಿಯೆಯನ್ನೂ ನೀಡಲ್ಲ. ನಾನು ಒಂದು ಹೇಳಿದರೆ ಸರ್ಕಾರ ಇನ್ನೊಂದು ಹೇಳುತ್ತೆ, ಮಾಧ್ಯಮಗಳು ಇನ್ನೇನೂ ಸುದ್ದಿ ಮಾಡುತ್ತಾರೆ ಇದೆಲ್ಲಕ್ಕಿಂತ ಮೌನವಾಗಿ ಪಾದಯಾತ್ರೆ ಮಾಡುವುದು ಉತ್ತಮ ಎಂದು ನಿರ್ಧರಿಸಿ ಮೂರು ದಿನ ಮಾತನಾಡದಿರಲು ತೀರ್ಮಾನಿಸಿದ್ದೇನೆ. ಶಾಸಕರು, ಹಿರಿಯ ನಾಯಕರು ಬೇಕಿದ್ದರೆ ಮಾತನಾಡಲಿ ಎಂದರು.
ಪಾದಯಾತ್ರೆಯನ್ನು ತಡೆಯಲು ಬಿಜೆಪಿ ಶತ ಪ್ರಯತ್ನ ನಡೆಸಿದೆ. ನಿನ್ನೆ ರಾಮನಗರದ ಎಡಿಸಿಯನ್ನು ನನ್ನ ಬಳಿಗೆ ಕಳುಹಿಸಿ ಕೋವಿಡ್ ಟೆಸ್ಟ್ ಮಾಡಿಸಲು ಹೇಳಿಸಿದರು. ನನಗೆ ಯಾವ ಟೆಸ್ಟ್ ಅಗತ್ಯವಿಲ್ಲ. ಸೋಂಕಿನ ಯಾವ ಲಕ್ಷಣವೂ ನನಗಿಲ್ಲ. ನನ್ನ ಬಳಿ ಬಂದ ಆ ಅಧಿಕಾರಿ ಇಂದು ತನಗೆ ಕೊರೊನಾ ಪಾಸಿಟಿವ್ ಎನ್ನುತ್ತಿದ್ದಾರೆ. ಅಂದರೆ ರಾಜ್ಯ ಸರ್ಕಾರ ಯಾವ ಮಟ್ಟದ ನೀಚ ರಾಜಕಾರಣ ಮಾಡುತ್ತಿದೆ ಎಂಬುದು ಇದರಿಂದ ಗೊತ್ತಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರದವರು ನನ್ನನ್ನು ಏನು ಮಾಡಬೇಕು ಅಂದುಕೊಂಡಿದ್ದಾರೆ? ಕೋವಿಡ್ ಪಾಸಿಟಿವ್ ಇರುವ ಅಧಿಕಾರಿಯನ್ನು ಪಾದಯಾತ್ರೆ ಮಾಡುತ್ತಿರುವಲ್ಲಿಗೆ ಕಳುಹಿಸಿದ್ದು ಅಲ್ಲದೇ ನನಗೆ ಅವರಿಂದ ಕೋವಿಡ್ ಟೆಸ್ಟ್ ಮಾಡಿಸಲು ಹೇಳುತ್ತಿದ್ದಾರೆ. ಪ್ರಾಥಮಿಕ ಸಂಪರ್ಕ ಎಂದು ಈಗ ಬಿಂಬಿಸಲು ಹೋಗಿದ್ದಾರೆ. ಸೋಂಕಿತ ಅಧಿಕಾರಿಯನ್ನು ಕಳುಹಿಸಿ ಪಾದಯಾತ್ರೆಯಲ್ಲಿ ಕೊರೊನಾ ಹರಡಿಸಲು ಮುಂದಾಗಿದ್ದಾರೆ.
ಸಾವಿರಾರು ಜನರು ಪಾಲ್ಗೊಂಡಿದ್ದ ಪಾದಯಾತ್ರೆಯಲ್ಲಿ 30 ಜನರ ವಿರುದ್ಧ ಎಫ್ ಐ ಆರ್ ಹಾಕಿದ್ದಾರೆ. ಸರ್ಕಾರದಿಂದಲೇ ಕೊರೊನಾ ಹರಡಿಸಿ ಕೋವಿಡ್ ಕೇಸ್ ಹೆಚ್ಚಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಭಯ ಹುಟ್ಟಿಸುವ ವಾತಾವರಣವನ್ನು ಬಿಜೆಪಿಗರು ಮಾಡುತ್ತಿದ್ದಾರೆ. ಬಿಜೆಪಿಗರ ನೀಚ ರಾಜಕಾರಣಕ್ಕೆ ಒಂದು ಮಿತಿ ಬೇಡವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಹೋರಾಟ ನೀರಿಗಾಗಿ. ವಾಕ್ ಫಾರ್ ವಾಟರ್… ಅದೇನು ಮಾಡುತ್ತಾರೆ ಮಾಡಲಿ ಯಾವ ಕಾರಣಕ್ಕೂ ಪಾದಯಾತ್ರೆ ಮಾತ್ರ ನಿಲ್ಲುವುದಿಲ್ಲ ಎಂದು ಅಬ್ಬರಿಸಿದ್ದಾರೆ.