ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಾಜ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮೂರನೇ ದಿನವಾದ ಇಂದೂ ಕೂಡ ಮುಂದುವರೆದಿದ್ದು, ಒತ್ತುವರಿ ಮಾಡಿ ಕಟ್ಟಡ ಕಟ್ಟಿಕೊಂಡಿದ್ದವರಿಗೆ ಆತಂಕ ಶುರುವಾಗಿದೆ.
ಬೆಳಗ್ಗೆ 9:30ರಿಂದಲೇ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಕಂದಾಯ ಇಲಾಖೆಯವರು ನೀಡಿದ ನಕ್ಷೆಯ ಆಧಾರದ ಮೇಲೆ ರಾಜ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದರ ಮಧ್ಯೆ ಪ್ರಭಾವಿಗಳಿಗೆ ಸೇರಿದ ಕಟ್ಟಡ ತೆರವುಗೊಳಿಸುವ ವೇಳೆ ಕಾಟಾಚಾರದ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದ್ದು, ಆದರೆ ಅಧಿಕಾರಿಗಳು ಇದನ್ನು ನಿರಾಕರಿಸಿದ್ದಾರೆ.
ಮಂಗಳವಾರದಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಕಂದಾಯ ಸಚಿವ ಆರ್. ಅಶೋಕ್ ರಾಜಕಾಲುವೆ ಒತ್ತುವರಿ ತೆರವುಗೊಳಿಸುವ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ. ಎಷ್ಟೇ ಪ್ರಭಾವಗಳಾಗಿದ್ದರೂ ಸಹ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದರು.