![](https://kannadadunia.com/wp-content/uploads/2023/03/exam-second-puc.jpg)
ಬೆಂಗಳೂರು : ದ್ವಿತೀಯ ಪಿಯುಸಿ “ಪೂರ್ವ ಸಿದ್ಧತಾ ಪರೀಕ್ಷೆ’ಯನ್ನು ಜಿಲ್ಲಾ ಉಪನಿರ್ದೇಶಕರ ನೇತೃತ್ವದಲ್ಲಿ ಜಿಲ್ಲಾ ಹಂತದಲ್ಲಿ ನಡೆಸುವ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ.
ಪ್ರತಿ ವರ್ಷವು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಪೂರ್ವಭಾವಿಯಾಗಿ ಜಿಲ್ಲಾ ಹಂತದಲ್ಲಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ನಡೆಸಿಕೊಂಡು ಬರುತ್ತಿರುವುದು ಸರಿಯಷ್ಟೆ. ರಾಜ್ಯಾದ್ಯಂತ 2024ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ನ್ನು ದಿನಾಂಕ: 02-03-2024 ರಿಂದ 22-03-2024 ರವರೆಗೆ ನಡೆಸಲು ತಾತ್ಕಾಲಿಕ ವೇಳಾಪಟ್ಟಿಯನ್ನು ಈಗಾಗಲೇ ಮಂಡಲಿಯ ಜಾಲತಾಣದಲ್ಲಿ ಪ್ರಕಟಿಸಲಾಗಿರುತ್ತದೆ.
ಈ ಹಿನ್ನೆಲೆಯಲ್ಲಿ, ಆಯಾ ಜಿಲ್ಲೆಗಳ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, (ಪದವಿ ಪೂರ್ವ) ರವರು ಜಿಲ್ಲಾ ಮಟ್ಟದಲ್ಲಿ ವೇಳಾ ಪಟ್ಟಿ ಹಾಗೂ ಮಂಡಲಿಯ ನಿರ್ದೇಶನದಂತೆ ಪ್ರಾಯೋಗಿಕ ಪರೀಕ್ಷೆ ಹೊಂದಿರುವ ವಿಷಯಗಳಲ್ಲಿ 70 ಅಂಕಗಳು ಹಾಗೂ ಪ್ರಾಯೋಗಿಕ ಪರೀಕ್ಷೆ ಹೊಂದಿರದ ವಿಷಯಗಳಲ್ಲಿ 80 ಅಂಕಗಳಿಗೆ ಪ್ರಶ್ನೆಪತ್ರಿಕೆಗಳನ್ನು ಈಗಾಗಲೇ ಮಂಡಲಿಯ ಜಾಲತಾಣದಲ್ಲಿ ಅಪ್ ಲೋಡ್ ಮಾಡಿರುವ ಮಾದರಿ ಪ್ರಶ್ನೆಪತ್ರಿಕೆಗಳು ಹಾಗೂ ನೀಲನಕ್ಷೆಗಳ ಆಧಾರದ ಮೇಲೆ ವಿಭಾಗ ಮಟ್ಟದಲ್ಲಿ ಪ್ರಶ್ನೆಪತ್ರಿಕಾ ತಯಾರಿಕಾ ತರಬೇತಿ ಹೊಂದಿದ ಉಪನ್ಯಾಸಕರನ್ನು ಬಳಸಿಕೊಂಡು ಸಿದ್ಧಪಡಿಸುವುದು.
ತಮ್ಮ ವ್ಯಾಪ್ತಿಯಲ್ಲಿ ಬರುವ ಪದವಿ ಪೂರ್ವ ಕಾಲೇಜುಗಳಿಗೆ ಅಗತ್ಯಕ್ಕನುಗುಣವಾಗಿ ಪ್ರಶ್ನೆಪತ್ರಿಕೆಗಳನ್ನು ವಿತರಿಸಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ದಿನಾಂಕ:16-01-2024 ರಿಂದ 30-01-2024 ರವರೆಗೆ ಯಾವುದೇ ಲೋಪಗಳಿಗೆ ಅವಕಾಶ ನೀಡದಂತೆ ಪರೀಕ್ಷಾ ಗೌಪ್ಯತೆಯೊಂದಿಗೆ ಪರೀಕ್ಷೆಯನ್ನು ನಡೆಸಲು ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ.
![](https://kannadadunia.com/wp-content/uploads/2023/12/WhatsApp-Image-2023-12-28-at-6.35.33-PM.jpeg)