ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ದೇಶದೆಲ್ಲೆಡೆ ಈಗ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿದೆ. ಸಾರ್ವಜನಿಕರು ಸಹ ಎಲೆಕ್ಟ್ರಿಕ್ ಕಾರು, ಸ್ಕೂಟರ್ ಗಳನ್ನು ಖರೀದಿಸುತ್ತಿದ್ದು ಸರ್ಕಾರಗಳು ಸಹ ಚಾರ್ಜಿಂಗ್ ಪಾಯಿಂಟ್ ಸ್ಥಾಪನೆಗೆ ಒತ್ತು ನೀಡುತ್ತಿವೆ.
ಇದರ ಜೊತೆಗೆ ಸರ್ಕಾರಿ ವಾಹನಗಳನ್ನು ಸಹ ಎಲೆಕ್ಟ್ರಿಕ್ ಆಗಿ ಪರಿವರ್ತಿಸಲು ತೀರ್ಮಾನಿಸಲಾಗಿದ್ದು, ಇದರ ಮಧ್ಯೆ ರಾಜ್ಯ ಸಾರಿಗೆ ನಿಗಮ ಮಹತ್ವದ ತೀರ್ಮಾನ ಒಂದನ್ನು ಕೈಗೊಂಡಿದೆ. 2030 ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಬಸ್ ಗಳನ್ನು ಬಳಸಲು ನಿರ್ಧರಿಸಲಾಗಿದೆ.
ಬುಧವಾರದಂದು ವಿಧಾನಸಭೆಯಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಈ ವಿಷಯ ತಿಳಿಸಿದ್ದು, ಪ್ರಸ್ತುತ ಸಾರಿಗೆ ನಿಗಮಗಳಲ್ಲಿ ಒಟ್ಟು 35,000 ಬಸ್ ಗಳಿದ್ದು, 2030 ರ ವೇಳೆಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ಬಸ್ ಬಳಸಲಾಗುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಅಡಿ ಕಳೆದ ಡಿಸೆಂಬರ್ ನಿಂದ 90 ಎಲೆಕ್ಟ್ರಿಕ್ ಬಸ್ ಗಳು ಕಾರ್ಯಾಚರಣೆ ನಡೆಸುತ್ತಿದ್ದು, ಕೇಂದ್ರ ಸರ್ಕಾರದ ಫೇಮ್ 2 ಯೋಜನೆಯಲ್ಲಿ ಆಗಸ್ಟ್ 15 ರಿಂದ 75 ಬಸ್ಸುಗಳ ಸಂಚಾರ ಆರಂಭವಾಗಿದೆ ಎಂದು ತಿಳಿಸಿದ್ದಾರೆ.