ದೇಶದ ಕೋಟ್ಯಾಂತರ ಮಂದಿ ಭಕ್ತರ ಕನಸು ಸಾಕಾರಗೊಳ್ಳುವ ಕಾಲ ಸಮೀಪಿಸಿದೆ. ಬಹು ನಿರೀಕ್ಷೆಯ ಅಯೋಧ್ಯೆ ರಾಮ ಮಂದಿರ 2024ಕ್ಕೆ ಸಿದ್ಧವಾಗಲಿದ್ದು ಮಕರ ಸಂಕ್ರಾಂತಿ ದಿನದಂದು ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ.
ಉತ್ತರ ಪ್ರದೇಶದ ಫೈಜಾಬಾದ್ ಸರ್ಕಿಟ್ ಹೌಸ್ ನಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸುದೀರ್ಘ ಸಭೆ ನಡೆಸಿದ್ದು, ಈ ಸಂದರ್ಭದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲದೆ ಸಂಕೀರ್ಣದಲ್ಲಿ ಇನ್ನೂ ಏಳು ದೇವಸ್ಥಾನಗಳನ್ನು ನಿರ್ಮಿಸುವ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಲಾಗಿದೆ.
ರಾಮ ಮಂದಿರ ನಿರ್ಮಾಣ ಕಾಮಗಾರಿ ಶೇಕಡ 40ರಷ್ಟು ಪೂರ್ಣಗೊಂಡಿದ್ದು, 2023 ಡಿಸೆಂಬರ್ ಹೊತ್ತಿಗೆ ಮೊದಲ ಮಹಡಿ ಕಾರ್ಯ ಮುಕ್ತಾಯಗೊಳ್ಳಲಿದೆ. ಯೋಜನೆಗೆ ಅಂದಾಜು 1800 ಕೋಟಿ ರೂಪಾಯಿಗಳು ವೆಚ್ಚವಾಗಲಿದೆ ಎಂದು ತಿಳಿದುಬಂದಿದೆ.