2023ರ ಆರಂಭ ಟೆಕ್ಕಿಗಳ ಪಾಲಿಗೆ ಕಹಿಯಾಗಿದೆ. ಕೇವಲ 5 ದಿನಗಳಲ್ಲಿ 30,000ಕ್ಕೂ ಹೆಚ್ಚು ಟೆಕ್ಕಿಗಳು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. 2022 ರಲ್ಲಿ ಸುಮಾರು 1,168 ಕಂಪನಿಗಳು 2,43,468 ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕಿದ್ದವು.
ಇದೇ ಸಂಸ್ಕೃತಿ 2023ರಲ್ಲೂ ಮುಂದುವರಿದಿದೆ. ಅಮೆರಿಕದ ಬ್ಯೂರೋ ಆಫ್ ಲೇಬರ್ ಸ್ಟಾಟಿಸ್ಟಿಕ್ಸ್ ಪ್ರಕಾರ ಜನವರಿಯಲ್ಲಿ ಅತ್ಯಧಿಕ ವಜಾ ಪ್ರಕ್ರಿಯೆ ನಡೆದಿದೆ. ಅಮೇಜಾನ್‌ನಿಂದ ಹಿಡಿದು ಬೈಟ್ ಡಾನ್ಸ್‌ವರೆಗೆ ಅನೇಕ ಕಂಪನಿಗಳು 2023ರ ಮೊದಲ ವಾರದಲ್ಲಿ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಿವೆ.
ಅಮೆಜಾನ್: ಸುಮಾರು 18,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಅಮೇಜಾನ್ ನಿರ್ಧರಿಸಿದೆ. ಅಮೆಜಾನ್ ಸಿಇಓ ಆಂಡಿ ಜಸ್ಸಿ, ಈ ಹಿಂದೆ ಹೇಳಿದಂತೆ ವಾರ್ಷಿಕ ಯೋಜನಾ ಪ್ರಕ್ರಿಯೆಯೊಂದಿಗೆ ಮಾಡಿಲ್ಲ, 2023ರ ಆರಂಭದಲ್ಲಿ ಇನ್ನೂ ಹೆಚ್ಚಿನ ಉದ್ಯೋಗ ಕಡಿತವನ್ನು ನಿರೀಕ್ಷಿಸಿದ್ದೆ ಎಂದಿದ್ದಾರೆ.
ಸೇಲ್ಸ್‌ಫೋರ್ಸ್: ಸೇಲ್ಸ್‌ಫೋರ್ಸ್ ಸುಮಾರು 7,000 ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕಿದೆ. ಉದ್ಯೋಗಿಗಳಿಗೆ ಪತ್ರ ಬರೆದಿರುವ ಸೇಲ್ಸ್‌ಫೋರ್ಸ್ ಸಿಇಓ ಮಾರ್ಕ್ ಬೆನಿಯೋಫ್, ಪ್ರಸ್ತುತ ಎದುರಾಗಿರುವ ಸವಾಲನ್ನು ಎದುರಿಸಲು ಸುಮಾರು 10 ಪ್ರತಿಶತದಷ್ಟು ಉದ್ಯೋಗಿಗಳನ್ನು ಕಡಿಮೆ ಮಾಡಲು ಕಠಿಣ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಪ್ರಕಟಿಸಿದ್ದಾರೆ.
ಪೆಗಾಸಿಸ್ಟಮ್ಸ್: ಸಾಫ್ಟ್‌ವೇರ್ ಕಂಪನಿ ಪೆಗಾಸಿಸ್ಟಮ್ಸ್ ತನ್ನ 6,000 ಉದ್ಯೋಗಿಗಳಲ್ಲಿ ಶೇ.4ರಷ್ಟು ಮಂದಿಯನ್ನು ವಜಾಗೊಳಿಸುತ್ತಿದೆ. 2023 ರಲ್ಲಿ ಆರ್ಥಿಕ ಹಿಂಜರಿತದ ಭೀತಿಯಿದೆ ಅನ್ನೋದು ಸಂಸ್ಥೆಯ ಸಮರ್ಥನೆ.
ಬೈಟ್‌ಡ್ಯಾನ್ಸ್: ಚೀನಾ ಮೂಲದ ಟಿಕ್‌ಟಾಕ್ ಮಾಲೀಕ ಸಂಸ್ಥೆ ಬೈಟ್‌ಡ್ಯಾನ್ಸ್ ಅನೇಕ ವಿಭಾಗಗಳಲ್ಲಿ ನೂರಾರು ಕೆಲಸಗಾರರನ್ನು ವಜಾಗೊಳಿಸಿದೆ. ವಜಾಗೊಳಿಸುವಿಕೆಯು 600 ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಟಿಕ್‌ಟಾಕ್‌ನ ಚೈನೀಸ್ ಆವೃತ್ತಿಯಾದ ಡೌಯಿನ್‌ನಲ್ಲಿನ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ.