ವಿಜಯಪುರ; ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚುನಾವಣೆ ಬರುತ್ತಿದೆ ಎಂದು ಆಗಮಿಸಿದ್ದಾರೆ. ಚುನಾವಣೆ ಮುಗಿದ ಬಳಿಕ ಹೋಗುತ್ತಾರೆ. ರಾಜ್ಯದ ಜನತೆಗೆ ಯಾವುದೇ ನ್ಯಾಯ ನೀಡುವ ನಿಟ್ಟಿನಲ್ಲಿ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಕೃಷ್ಣಾ ನೀರಾವರಿ ಯೋಜನೆ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿಯವರು ಅಧಿಕಾರ ಇರುವವರೆಗೂ ಏನೂ ಮಾಡಿಲ್ಲ. ಈಗ ಅಧಿಕಾರ ಹೋಗುವಾಗ ಘೋಷಣೆಗಳನ್ನು ಮಾಡುತ್ತಿದ್ದಾರೆ. ಈಗ ಯೋಜನೆಗಳನ್ನು ಘೋಷಣೆ ಮಾಡಿ ಏನು ಸುಖ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಸರ್ಕಾರದ ಅವಧಿ ಕೇವಲ 100 ದಿನ ಮಾತ್ರ ಇದೆ. ಈಗ ಏನಾದರೂ ಘೋಷಣೆ ಮಾಡಿದರೆ ಜಾರಿ ಮಾಡಲು ಆಗುತ್ತದೆಯೇ? ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ಕೊಡಲು ಹೊರಡುತ್ತಿದ್ದಾರೆ. ಆದರೆ ನಾವು ಮುಂದೆ ಏನು ಮಾಡುತ್ತೇವೆ ಎಂದು ಹೇಳುತ್ತಿದ್ದೇವೆ. ಬಿಜೆಪಿಯವರು ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ನೀಡಿದ್ದರು. ಅದರಲ್ಲಿ ಕೇವಲ 50 ಭರವಸೆಗಳನ್ನು ಮಾತ್ರ ಈಡೇರಿಸಿದ್ದಾರೆ. ನಾವು 169 ಭರವಸೆಗಳನ್ನು ನೀಡಿದ್ದೆವು. 165 ಭರವಸೆಗಳನ್ನು ಈಡೇರಿಸಿದ್ದೇವೆ ಎಂದರು.
ನಾಳೆ ಹೊಸ ವರ್ಷಾಚರಣೆ. ನಾಳೆಯಿಂದ ಹಲವು ಬದಲಾವಣೆ ಆರಂಭವಾಗುತ್ತದೆ. 2023ಕ್ಕೆ ಕಾಂಗ್ರೆಸ್ ಪಕ್ಷ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುತ್ತೆ. ರಾಜ್ಯದ ಜನ ಆಶಿರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.