ಆರ್ಥಿಕ ಬಿಕ್ಕಟ್ಟಿನತ್ತ ವಿಶ್ವ ಸಾಗುತ್ತಿರುವ ಬೆನ್ನಲ್ಲೇ ಬಹು ರಾಷ್ಟ್ರೀಯ ಕಂಪನಿಗಳು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಿವೆ. ಈಗಾಗಲೇ ಟ್ವಿಟ್ಟರ್, ಮೆಟಾ, ಸಿಸ್ಕೋ ಮೊದಲಾದ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಅಮೆಜಾನ್ ಕೂಡ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.
ಈ ಮೊದಲು ಹತ್ತು ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಅಮೆಜಾನ್ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದ್ದರೂ ಈಗ ಹೊರ ಬಿದ್ದಿರುವ ಮಾಹಿತಿ ಪ್ರಕಾರ 20,000 ಮಂದಿಯ ಉದ್ಯೋಗಕ್ಕೆ ಕುತ್ತು ಬರಲಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಮ್ಯಾನೇಜರ್ ಅಂತಹ ಉನ್ನತ ಹುದ್ದೆಯಲ್ಲಿರುವವರನ್ನೂ ಕೂಡ ವಜಾಗೊಳಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ವಜಾಗೊಳ್ಳುವ ಉದ್ಯೋಗಿಗಳಿಗೆ ಪರಿಹಾರವಾಗಿ ಕೆಲ ತಿಂಗಳುಗಳ ವೇತನವನ್ನು ಮುಂಗಡವಾಗಿ ನೀಡುವ ಸಾಧ್ಯತೆಯಿದ್ದು, ಈಗಾಗಲೇ ಕೆಲಸದಿಂದ ಕಿತ್ತು ಹಾಕುವ ಉದ್ಯೋಗಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಲಾಗಿದೆ. ವಿಶ್ವದ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಅಮೆಜಾನ್ ಉದ್ಯೋಗಿಗಳಿಗೆ ಇದು ಅನ್ವಯಿಸುತ್ತದೆ ಎಂದು ತಿಳಿದು ಬಂದಿದೆ.