ಕಳೆದ ವರ್ಷದ ಜನವರಿಯಲ್ಲಿ ಆರಂಭಗೊಂಡ ಕೊರೊನಾ ಲಸಿಕೆ ಅಭಿಯಾನದಲ್ಲಿ ಭಾರತ ಅದ್ಭುತ ಯಶಸ್ಸನ್ನು ಸಾಧಿಸಿದೆ. ಭಾನುವಾರದ ವೇಳೆಗೆ 200 ಕೋಟಿ ಲಸಿಕೆಯ ಗುರಿಯನ್ನು ತಲುಪಿದ್ದು, ಭಾರತದ ಈ ಸಾಧನೆಗಾಗಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್, ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಬಿಲ್ ಗೇಟ್ಸ್ ಟ್ವೀಟ್ ಮಾಡಿದ್ದು, 200 ಕೋಟಿ ಕೊರೊನಾ ಲಸಿಕೆಯ ಗುರಿ ತಲುಪಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ವಿಶ್ವದಲ್ಲಿ ಕೊರೊನಾ ನಿಯಂತ್ರಣಕ್ಕೆ ಭಾರತದ ಲಸಿಕಾ ಉತ್ಪಾದಕ ಕಂಪನಿಗಳ ಕೊಡುಗೆಯೂ ಇದೆ ಎಂದು ಅವರು ಹೇಳಿದ್ದಾರೆ.
18 ತಿಂಗಳ ಹಿಂದೆ ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನ ಆರಂಭವಾಗಿದ್ದು, ಭಾನುವಾರದಂದು 200 ಕೋಟಿ ಗಡಿಯನ್ನು ತಲುಪಲಾಗಿದೆ. 12 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಲಸಿಕೆ ಉಚಿತವಾಗಿ ನೀಡಿರುವುದು ಗಮನಾರ್ಹ. ಇದೀಗ ಬೂಸ್ಟರ್ ಡೋಸ್ ನೀಡುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ.