ಉತ್ತರ ಭಾರತದ ಹಲವು ರಾಜ್ಯಗಳಂತೆ ರಾಜಸ್ಥಾನವೂ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯನ್ನು ಎದುರಿಸುತ್ತಿದೆ. ಕಳೆದ ಕೆಲವು ದಿನಗಳಿಂದ ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ತೈಲ ಕಂಪನಿಗಳು ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಮಾಡುತ್ತಿಲ್ಲ. ಇದರಿಂದಾಗಿ ರಾಜಸ್ಥಾನದ ಆರೂವರೆ ಸಾವಿರ ಪೆಟ್ರೋಲ್ ಪಂಪ್‌ಗಳಲ್ಲಿ ಸುಮಾರು ಎರಡು ಸಾವಿರ ಪೆಟ್ರೋಲ್ ಪಂಪ್‌ಗಳು ಬತ್ತಿ ಹೋಗಿವೆ.
ರಾಜಧಾನಿ ಜೈಪುರದಲ್ಲಿ ಸುಮಾರು 650 ಪೆಟ್ರೋಲ್ ಪಂಪ್‌ಗಳಿದ್ದು, ಇವುಗಳಲ್ಲಿ ನೂರಕ್ಕೂ ಹೆಚ್ಚು ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಲಭ್ಯವಿಲ್ಲ ಎಂಬ ಬೋರ್ಡ್‌ಗಳನ್ನು ಹಾಕಲಾಗಿದೆ. ಸುಮಾರು ಎರಡು ವಾರಗಳ ಕಾಲ ರಿಲಯನ್ಸ್ ಮತ್ತು ಎಸ್ಸಾರ್‌ನ ಪೆಟ್ರೋಲ್ ಬಂಕ್‌ಗಳನ್ನು ಮುಚ್ಚಿರುವುದು ಈ ಕೊರತೆಗೆ ಪ್ರಮುಖ ಕಾರಣ ಎನ್ನಲಾಗ್ತಿದೆ. ರಾಜಸ್ಥಾನದಲ್ಲಿ ಈ ಎರಡೂ ಕಂಪನಿಗಳ ಮಾರುಕಟ್ಟೆ ಪಾಲು ಶೇ.15 ರಷ್ಟಿದೆ.
ಅವುಗಳನ್ನು ಮುಚ್ಚಿದ್ದರಿಂದ ಇತರ ಕಂಪನಿಗಳಿಗೆ ತೈಲ ಪೂರೈಕೆ ಹೊರೆಯಾಗಿ ಪರಿಣಮಿಸಿದೆ. ಭಾರತ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳಿಂದ ಪೂರೈಕೆ ಕೂಡ ಕಡಿಮೆಯಾಗಿರೋದು ಇಂಧನ ಕೊರತೆಗೆ ಇನ್ನೊಂದು ಕಾರಣ. ರಾಜಸ್ತಾನದಲ್ಲಿ ಇಂಡಿಯನ್ ಆಯಿಲ್ ಕಂಪನಿ ಮಾತ್ರ ಪೂರ್ಣ ಪ್ರಮಾಣದಲ್ಲಿ ತೈಲ ಪೂರೈಕೆ ಮಾಡುತ್ತಿದೆಯಂತೆ.
ಅಪಾರ ನಷ್ಟದಲ್ಲಿರುವುದರಿಂದ ಸರ್ಕಾರದ ಅಧೀನದಲ್ಲಿರೋ ಕಂಪನಿಗಳು ಪೆಟ್ರೋಲ್, ಡೀಸೆಲ್ ಅನ್ನು ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲಾಗುತ್ತಿಲ್ಲ ಅಂತಾನೂ ಹೇಳಲಾಗ್ತಿದೆ. ಇನ್ನೂ ಮೂರ್ನಾಲ್ಕು ದಿನ ರಾಜಸ್ಥಾನದ ವಾಹನ ಸವಾರರು ಇದೇ ರೀತಿ ಪೆಟ್ರೋಲ್-ಡೀಸೆಲ್ ಕೊರತೆಯನ್ನು ಎದುರಿಸಬೇಕಾಗಬಹುದು. ಪೆಟ್ರೋಲ್ ಡೀಸೆಲ್ ಕೊರತೆ ರಾಜ್ಯದ ಕೃಷಿ ಮತ್ತು ಕೈಗಾರಿಕೆಗಳ ಮೇಲೂ ಪರಿಣಾಮ ಬೀರಿದೆ. ಕೈಗಾರಿಕಾ ಉತ್ಪಾದನೆ ಕುಂಠಿತಗೊಂಡಿದೆ. ಬಿತ್ತನೆ ಮಾಡಲು ಮುಂದಾಗಿರುವ ರೈತರಿಗೆ ಡೀಸೆಲ್ ಸಿಗುತ್ತಿಲ್ಲ.