ಕಳೆದ ಎರಡು ವರ್ಷಗಳ ಹಿಂದೆ ದೇಶದಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ಮಹಾಮಾರಿ ಕಾರಣಕ್ಕೆ ಹಬ್ಬ ಹರಿದಿನಗಳ ಸಾರ್ವಜನಿಕ ಆಚರಣೆಗೆ ಅವಕಾಶ ನಿರಾಕರಿಸಲಾಗಿತ್ತಲ್ಲದೆ ಆರ್ಥಿಕವಾಗಿಯೂ ಜನರು ಹೈರಾಣಾಗಿದ್ದರು. ಇದೀಗ ಮತ್ತೆ ಎಂದಿನ ಸಹಜ ಸ್ಥಿತಿಗೆ ಜೀವನ ಮರಳಿದ್ದು, ಹಬ್ಬದಾಚರಣೆಗಳು ಕಳೆಗಟ್ಟಿವೆ.
ದೇಶದ ಪ್ರಮುಖ ಆಚರಣೆಗಳಲ್ಲಿ ಒಂದಾದ ಸಾರ್ವಜನಿಕ ಗಣೇಶೋತ್ಸವಕ್ಕೆ ಜನತೆ ಸಜ್ಜಾಗಿದ್ದು, ಇದಕ್ಕಾಗಿ ಈಗಾಗಲೇ ಮೂರ್ತಿಗಳಿಗೆ ಬೇಡಿಕೆ ಸಲ್ಲಿಸಲು ಆರಂಭಿಸಿದ್ದಾರೆ. ಇದರಿಂದಾಗಿ ಕಳೆದ ಎರಡು ವರ್ಷಗಳಿಂದ ಕೆಲಸವಿಲ್ಲದೆ ಆರ್ಥಿಕವಾಗಿ ಕಂಗೆಟ್ಟಿದ್ದ ಮೂರ್ತಿ ತಯಾರಕರ ಮೊಗದಲ್ಲಿ ಮಂದಹಾಸ ಮೂಡಿದೆ.
ಈ ಬಾರಿ ಗಣೇಶನ ಜೊತೆಗಿರುವ ಪುನೀತ್ ರಾಜಕುಮಾರ್ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಕಲಾವಿದರೂ ಸಹ ಇದಕ್ಕೆ ಅನುಗುಣವಾಗಿ ಕೆಲಸ ಮಾಡುತ್ತಿದ್ದಾರೆ. ಯುವಕ ಸಂಘಗಳು ಪೆಂಡಾಲ್ ಗಳಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸಲುವಾಗಿ ಈಗಾಗಲೇ ಸಕಲ ಸಿದ್ಧತೆ ನಡೆಸಿದ್ದಾರೆ.