ಬೆಂಗಳೂರು: ರಾಜ್ಯದಲ್ಲಿ ಇಬ್ಬರಲ್ಲಿ ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ಪತ್ತೆಯಾಗಿದ್ದು, ಅಚ್ಚರಿ ವಿಚಾರವೆಂದರೆ ಇಬ್ಬರೂ ಎರಡು ಡೋಸ್ ಲಸಿಕೆ ಪಡೆದವರಾಗಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ರಾಜ್ಯದಲ್ಲಿ ಇಬ್ಬರಲ್ಲಿ ಒಮಿಕ್ರಾನ್ ದೃಢಪಟ್ಟಿದೆ. ಒಮಿಕ್ರಾನ್ ಪತ್ತೆಯಾಗಿರುವ ಇಬ್ಬರೂ ಕೂಡ ಎರಡು ಡೋಸ್ ಲಸಿಕೆ ಪಡೆದವರಾಗಿದ್ದಾರೆ. ವ್ಯಕ್ತಿಗಳ ವೈಯಕ್ತಿಕ ವಿಚಾರ ಘೋಷಿಸುವುದು ಸರಿಯಲ್ಲ. ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿನ ಲಕ್ಷಣ ಲಘುವಾಗಿರುವುದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಒಮಿಕ್ರಾನ್ ಬಗ್ಗೆ ಅನಗತ್ಯ ಗೊಂದಲ, ಊಹಾಪೋಹಹಗಳು ಬೇಡ. ಯಾರೂ ಕೂಡ ವದಂತಿಗಳಿಗೆ ಕಿವಿಗೊಡಬಾರದು. ಡೆಲ್ಟಾದಂತೆ ಒಮಿಕ್ರಾನ್ ಸೋಂಕಿನಲ್ಲಿ ಉಸಿರಾಟದಂತಹ ಗಂಭೀರ ಸಮಸ್ಯೆಗಳು ಇರುವುದಿಲ್ಲ. ರೂಪಾಂತರಿ ವೈರಸ್ ಬಗ್ಗೆ ಭಯ ಬೇಡ ಎಂದು ಹೇಳಿದರು.
ಇನ್ನು ಒಮಿಕ್ರಾನ್ ಪತ್ತೆ ಹಿನ್ನೆಲೆಯಲ್ಲಿ ನಾಳೆ ಸಿಎಂ ಬಸವರಾಜ್ ಬೊಮ್ಮಾಯಿ ಆರೋಗ್ಯಾಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಮುಂಜಾಗೃತಾ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದ ಸಚಿವರು, ಜನರು ಗುಂಪು ಸೇರುವುದನ್ನು ನಿಲ್ಲಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿ ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ಸಲಹೆ ನೀಡಿದರು.