ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬೂಸ್ಟರ್ ಡೋಸ್ ಆಗಿ ಮೂರನೇ ಕೊರೊನಾ ಲಸಿಕೆ ಪಡೆಯಲು ಕ್ರಮ ಕೈಗೊಂಡಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ನೀಡಲಾರಂಭಿಸಲಾಗಿತ್ತಾದರೂ ಇದಕ್ಕೆ ಶುಲ್ಕ ವಿಧಿಸಲಾಗುತ್ತಿತ್ತು.
ಇದೀಗ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, ಜುಲೈ 15ರ ನಾಳೆಯಿಂದ 18ರಿಂದ 59ರ ವಯೋಮಿತಿಯವರು ಸರ್ಕಾರಿ ಆಸ್ಪತ್ರೆಗಳ ಮೂಲಕ ಉಚಿತವಾಗಿ ಬೂಸ್ಟರ್ ಡೋಸ್ ಪಡೆಯಬಹುದಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
75 ದಿನಗಳ ಕಾಲ ದೇಶದಾದ್ಯಂತ ಬೂಸ್ಟರ್ ಡೋಸ್ ಉಚಿತವಾಗಿ ಲಭ್ಯವಿರಲಿದ್ದು, ಎರಡನೇ ಡೋಸ್ ಪಡೆದು ಆರು ತಿಂಗಳಾದವರು ಇದನ್ನು ಪಡೆಯಬಹುದಾಗಿದೆ. ಪ್ರಸ್ತುತ ದೇಶದಲ್ಲಿ ಶೇಕಡಾ 96 ರಷ್ಟು ಮಂದಿ ಮೊದಲ ಡೋಸ್ ಪಡೆದಿದ್ದರೆ ಶೇಕಡ 87 ರಷ್ಟು ಮಂದಿ ಎರಡೂ ಡೋಸ್ ಪಡೆದಿದ್ದಾರೆ. ಆದರೆ ಬೂಸ್ಟರ್ ಡೋಸ್ ಪಡೆದವರು ಕೇವಲ ಶೇಕಡ 1ರಷ್ಟು ಮಂದಿ ಮಾತ್ರ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಉಚಿತವಾಗಿ ಬೂಸ್ಟರ್ ನೀಡಲು ತೀರ್ಮಾನಿಸಿದೆ.