ತಿರುಪತಿ ತಿಮ್ಮಪ್ಪನಿಗೆ ವಸ್ತ್ರಾಲಂಕಾರ ಸೇವೆ ಮಾಡಿಸುವ ಸಲುವಾಗಿ ವ್ಯಕ್ತಿಯೊಬ್ಬರು 2006 ರಲ್ಲೇ ಬುಕ್ ಮಾಡಿದ್ದರೂ ಅವಕಾಶ ಸಿಗದ ಹಿನ್ನೆಲೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ಗೆ ಗ್ರಾಹಕ ನ್ಯಾಯಾಲಯ 50 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಕೆ.ಆರ್. ಹರಿಭಾಸ್ಕರ್ ಎಂಬವರು 2006ರಲ್ಲಿ 12,250 ರೂ. ಪಾವತಿಸಿ ವಿಶೇಷ ಉತ್ರ ಅಲಂಕಾರ ಸೇವೆಗೆ ಅವಕಾಶ ಕೋರಿದ್ದರು. ಇವರಿಗೆ 2020ರ ಜುಲೈ 10ಕ್ಕೆ ಸೇವೆಯ ದಿನಾಂಕವನ್ನು ಟಿಟಿಡಿ ನಿಗದಿಪಡಿಸಿತ್ತು.
ಆದರೆ ಆ ಸಂದರ್ಭದಲ್ಲಿ ಕೊರೊನಾ ಕಾಣಿಸಿಕೊಂಡ ಕಾರಣ ದೇವಸ್ಥಾನದ ಎಲ್ಲ ವಿಶೇಷ ಪೂಜೆಗಳನ್ನು ರದ್ದುಗೊಳಿಸಲಾಗಿದ್ದು, ಹರಿಭಾಸ್ಕರ್ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಮತ್ತೊಂದು ದಿನಾಂಕವನ್ನು ನಿಗದಿಪಡಿಸುವಂತೆ ಮನವಿ ಮಾಡಿದ್ದರು.
ಆದರೆ ಇದಕ್ಕೆ ನಿರಾಕರಿಸಿದ್ದ ಟಿಟಿಡಿ ವಿಶೇಷ ವಿಐಪಿ ದರ್ಶನ ಪಡೆಯಲು ಅಥವಾ ಮೊತ್ತದ ಮರುಪಾವತಿಗಾಗಿ ಅರ್ಜಿ ಸಲ್ಲಿಸುವಂತೆ ಹರಿಭಾಸ್ಕರ್ ಅವರಿಗೆ ಸೂಚಿಸಿತು.
ಹೀಗಾಗಿ ಅವರು ಸೇಲಂ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದು, ಇದರ ವಿಚಾರಣೆ ನಡೆಸಿದ ಕೋರ್ಟ್ ಒಂದು ವರ್ಷದೊಳಗಾಗಿ ಅರ್ಜಿದಾರರು ಕೋರಿಕೊಂಡಿದ್ದ ವಿಶೇಷ ಸೇವೆಗೆ ಅವಕಾಶ ನೀಡಬೇಕು ಇಲ್ಲವಾದರೆ 50 ಲಕ್ಷ ರೂಪಾಯಿ ಮೊತ್ತ ಪಾವತಿಸಬೇಕು ಎಂದು ಆದೇಶಿಸಿದೆ.