15 ರಿಂದ 18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ ಆರಂಭಗೊಂಡು ಕೇವಲ 11 ದಿನಗಳಲ್ಲಿ ಬರೋಬ್ಬರಿ 3.14 ಕೋಟಿ ಮಕ್ಕಳು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ದೇಶದಲ್ಲಿ ಜನವರಿ 3ರಂದು 15 ರಿಂದ 18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ ಆರಂಭವಾಗಿತ್ತು.
ಈ ತಿಂಗಳ ಅಂತ್ಯದ ವೇಳೆಗೆ 15 ರಿಂದ 17 ವರ್ಷ ವಯಸ್ಸಿನ ಅಂದಾಜು 7.40 ಕೋಟಿ ಮಂದಿಯಲ್ಲಿ 85 ಪ್ರತಿಶತ ಮಕ್ಕಳಿಗೆ ಮೊದಲ ಡೋಸ್ ನೀಡಬೇಕು ಎಂಬುದು ಕೇಂದ್ರ ಸರ್ಕಾರದ ಪ್ಲಾನ್ ಆಗಿದೆ ಎನ್ನಲಾಗಿದೆ. ಕೋವಿನ್ ಪೋರ್ಟಲ್ನಲ್ಲಿರುವ ಮಾಹಿತಿಯ ಪ್ರಕಾರ ಇಲ್ಲಿಯವರೆಗೆ 3,14,87,269 ಮಂದಿ ಕೊರೊನಾ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದ್ದಾರೆ.
ಕೊರೊನಾ ಲಸಿಕೆ ಸ್ವೀಕರಿಸಿದ ಯುವಜನತೆಯನ್ನು ಶ್ಲಾಘಿಸಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಭಾರತದ ಯುವ ಜನತೆಯಲ್ಲಿ ಹೆಚ್ಚಿನ ಜವಾಬ್ದಾರಿ ಹಾಗೂ ಉತ್ಸಾಹವಿದೆ ಎಂದು ಹೇಳಿದ್ದಾರೆ. ಜೊತೆಯಲ್ಲಿ ಎಲ್ಲಾ ಅರ್ಹ ಫಲಾನುಭವಿಗಳು ಕೊರೊನಾ ಲಸಿಕೆ ಸ್ವೀಕರಿಸುವಂತೆ ಮನವಿ ಮಾಡಿದರು.