15 ರಿಂದ 18ನೇ ವರ್ಷ ಪ್ರಾಯದವರಿಗೆ ಎರಡನೇ ಡೋಸ್ ಕೊರೊನಾ ಲಸಿಕೆಗಳು ಇಂದಿನಿಂದ ಆರಂಭವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜನವರಿ ಮೂರನೇ ತಾರೀಖಿನಿಂದ ದೇಶದಲ್ಲಿ 15 ರಿಂದ 18 ವರ್ಷ ವಯಸ್ಸಿನವರಿಗೆ ಕೊರೊನಾ ಲಸಿಕೆ ಆರಂಭವಾಗಿತ್ತು.
ರಾಷ್ಟ್ರ ರಾಜಧಾನಿ ದೆಹಲಿಯೊಂದರಲ್ಲೇ 10.14 ಲಕ್ಷ 15ರಿಂದ 18 ವರ್ಷದವರಿದ್ದಾರೆ. ಶನಿವಾರದವರೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 8,04,690 ಫಲಾನುಭವಿಗಳಿಗೆ ಕೊರೊನಾ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ. ಡಿಸೆಂಬರ್ 27ರಂದು ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ 15ರಿಂದ 18 ವರ್ಷ ವಯಸ್ಸಿನವರಿಗೆ ಕೋವ್ಯಾಕ್ಸಿನ್ ಲಸಿಕೆಗಳನ್ನು ಮಾತ್ರ ನೀಡಲು ನಿರ್ಧರಿಸಲಾಗಿದೆ.
ಕಳೆದ ವಾರ ದೆಹಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ದೆಹಲಿಯಲ್ಲಿ 85 ಪ್ರತಿಶತ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಕೋವಿಡ್ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದ್ದಾರೆ ಎಂದು ಮಾಹಿತಿ ನೀಡಿದ್ದರು. ಆದರೆ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕಾ ಅಭಿಯಾನ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಹೇಳಿದ್ದರು.