ಉತ್ತರ ಪ್ರದೇಶದ ‘ಉತ್ತರ ಪ್ರದೇಶ ಸಹಕಾರಿ ಬ್ಯಾಂಕ್ ಲಿಮಿಟೆಡ್’ನ ಮಾಜಿ ಉದ್ಯೋಗಿಗಳು ನಡೆಸಲು ಯತ್ನಿಸಿದ್ದ ಭಾರಿ ವಂಚನೆಯನ್ನು ಹಾಲಿ ಉದ್ಯೋಗಿಗಳು ತಪ್ಪಿಸಿದ್ದಾರೆ. ಮಾಜಿ ಉದ್ಯೋಗಿಗಳು ಸೇರಿ ಬ್ಯಾಂಕ್ನಿಂದ 146 ಕೋಟಿ ರೂಪಾಯಿ ಲಪಟಾಯಿಸಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.
ಸೈಬರ್ ಹ್ಯಾಕರ್‌ಗಳು ಬ್ಯಾಂಕ್‌ನ ಮಾಜಿ ಉದ್ಯೋಗಿಯೊಂದಿಗೆ ಶಾಮೀಲಾಗಿ ಹಣವನ್ನು ಕದಿಯಲು ಪ್ರಯತ್ನಿಸುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಹಜರತ್‌ಗಂಜ್ ಶಾಖಾ ವ್ಯವಸ್ಥಾಪಕ, ಕ್ಯಾಷಿಯರ್ ಮತ್ತು ಗಾರ್ಡ್ ಸೇರಿದಂತೆ 10 ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಇಬ್ಬರು ನಿವೃತ್ತ ಬ್ಯಾಂಕ್ ಅಧಿಕಾರಿಗಳಾದ ಆರ್.ಎಸ್. ದುಬೆ ಮತ್ತು ಜಿ.ಎಸ್. ಚೌಹಾಣ್ ಅವರನ್ನು ಬಂಧಿಸಲಾಗಿದ್ದು, ಐಟಿ ಇಲಾಖೆಯಿಂದ ಆಡಿಟ್ ಕೂಡ ಕೇಳಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಹ್ಯಾಕರ್‌ಗಳು ಬ್ಯಾಂಕ್‌ನ ಹಜರತ್‌ಗಂಜ್ ಶಾಖೆಯಿಂದ ಹಣವನ್ನು ಕದಿಯಲು ಪ್ರಯತ್ನಿಸಿದ್ದರು.
ಬ್ಯಾಂಕ್ ಖಾತೆಯಿಂದ ಇತರ ಬ್ಯಾಂಕ್‌ಗಳಲ್ಲಿನ ಏಳು ವಿವಿಧ ಖಾತೆಗಳಿಗೆ 146 ಕೋಟಿ ರೂ.ಗಳನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿರುವುದನ್ನು ಶಾಖೆಯ ಅಧಿಕಾರಿಗಳು ಇದ್ದಕ್ಕಿದ್ದಂತೆ ಗಮನಿಸಿದಾಗ ಈ ಯತ್ನವು ಮುನ್ನೆಲೆಗೆ ಬಂದಿದೆ. ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಣದ ವರ್ಗಾವಣೆಯನ್ನು ಅಲ್ಲಿಯೇ ನಿಲ್ಲಿಸಿದರು, ಈ ಮೂಲಕ ಸೈಬರ್ ಅಪರಾಧಿಗಳ ಪ್ರಯತ್ನವನ್ನು ವಿಫಲಗೊಳಿಸಿದರು. ಸಹಕಾರಿ ಬ್ಯಾಂಕ್‌ನ ಮಾಜಿ ನೌಕರ ಇದರ ಕಿಂಗ್ಪಿನ್ ಎಂದು ತಿಳಿದುಬಂದಿದೆ. ತನಿಖೆ ಮುಂದುವರೆದಿದೆ.