ಪೆಟ್ರೋಲ್ ಹಾಗೂ ಡೀಸೆಲ್ ದರ ಮುಗಿಲು ಮುಟ್ಟಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಆಸಕ್ತಿ ತೋರಿದ್ದರು. ಇದಕ್ಕೆ ಪೂರಕವಾಗಿ ಸರ್ಕಾರವು ಸಹ ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಹಲವು ರಿಯಾಯಿತಿಗಳನ್ನು ಘೋಷಿಸಿತ್ತು.
ಇದರ ಮಧ್ಯೆ ದೇಶದ ಹಲವೆಡೆ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಸ್ಪೋಟಗೊಂಡ ಹಲವು ಪ್ರಕರಣಗಳು ನಡೆದಿದ್ದು, ಸಾವು-ನೋವು ಸಹ ಸಂಭವಿಸಿತ್ತು. ಹೀಗಾಗಿ ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಎಲೆಕ್ಟ್ರಿಕ್ ವಾಹನ ತಯಾರಿಕಾ ಸಂಸ್ಥೆಗಳ ಬಳಿ ವಿವರಣೆ ಕೇಳಿತ್ತು.
ಇದೀಗ ಪ್ರತಿಷ್ಠಿತ ಓಲಾ ಕಂಪನಿಯು ತನ್ನ S1 ಪ್ರೊ ಮಾಡೆಲ್ ನ 1,441 ಸ್ಕೂಟರ್ ಗಳನ್ನು ಹಿಂಪಡೆದುಕೊಂಡಿದ್ದು, ಇವುಗಳನ್ನು ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸುವ ಮೂಲಕ ಬೆಂಕಿ ಅವಘಡಕ್ಕೆ ನಿಖರ ಕಾರಣ ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದೆ.
ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಕ ಸಂಸ್ಥೆ ಓಕಿನಾವಾ ಆಟೋಟೆಕ್ 3000 ವಾಹನಗಳನ್ನು ಹಿಂಪಡೆದುಕೊಂಡಿದ್ದು, ಹಾಗೆಯೇ ಪ್ಯೂರ್ ಇವಿ ಕಂಪನಿ ಸಹ 2000ಕ್ಕೂ ಅಧಿಕ ವಾಹನಗಳನ್ನು ಹಿಂಪಡೆದುಕೊಂಡಿದ್ದು, ತಪಾಸಣೆಗೆ ಒಳಪಡಿಸಿದೆ.