ಬೆಂಗಳೂರು: ಶಾಲಾ ಮಕ್ಕಳ ಮೇಲೆ ದೈಹಿಕ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿಗಳು ಪೊಲೀಸ್ ತನಿಖೆ ವೇಳೆ ಬಹಿರಂಗವಾಗಿದೆ.
ಪ್ರಕರಣ ಸಂಬಂಧ ಹೆಬ್ಬಾಳ ಸರ್ಕಾರಿ ಶಾಲಾ ದೈಹಿಕ ಶಿಕ್ಷಕ ಆರೋಪಿ ಅಂಜಿನಪ್ಪನನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. 55 ವರ್ಷದ ಅಂಜಿನಪ್ಪ ಕಳೆದ 8 ತಿಂಗಳ ಹಿಂದಷ್ಟೇ ಹೆಬ್ಬಾಳ ಸರ್ಕಾರಿ ಶಾಲೆಗೆ ವರ್ಗವಾಗಿ ಬಂದಿದ್ದ. ಮಕ್ಕಳಿಗೆ ಆಟ-ಪಾಠ ಹೇಳಿಕೊಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ. ಬಾಲಕಿಯರು ಈ ಬಗ್ಗೆ ಮುಖ್ಯ ಶಿಕ್ಷಕರಿಗೆ ಮಾಹಿತಿ ನೀಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕರೇ ಠಾಣೆಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.
ಆರೋಪಿ ಅಂಜಿನಪ್ಪ ಶಾಲೆಯಲ್ಲಿ ಒಟ್ಟು 13 ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಪ್ರಸ್ತುತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.