ನವದೆಹಲಿ: 12 ಬಿಜೆಪಿ ಶಾಸಕರನ್ನು ಒಂದು ವರ್ಷದವರೆಗೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದ ಮಹಾರಾಷ್ಟ್ರದ ವಿಧಾನಸಭೆಯ ನಿರ್ಣಯವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ವಿಧಾನಸಭೆಯಲ್ಲಿ ಅನುಚಿತ ವರ್ತನೆ ತೋರಿದ ಆರೋಪಕ್ಕೆ ಸಂಬಂಧಿಸಿದಂತೆ 12 ಬಿಜೆಪಿ ಶಾಸಕರನ್ನು ಒಂದು ವರ್ಷದ ಕಾಲ ಅಮಾನತುಗೊಳಿಸಿ ಸ್ಪೀಕರ್ ಆದೇಶ ಹೊರಡಿಸಿದ್ದರು. ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾ.ಎ.ಎಂ. ಖಾನ್ವಿಲ್ಕರ್, ನ್ಯಾ. ದಿನೇಶ್ ಮಹೇಶ್ವರಿ, ನ್ಯಾ.ಸಿ.ಇ. ರವಿಕುಮಾರ್ ಅವರಿದ್ದ ತ್ರಿಸದಸ್ಯ ಪೀಠ ಮಹಾರಾಷ್ಟ್ರ ವಿಧಾನಸಭೆ ಆದೇಶ ರದ್ದುಗೊಳಿಸಿದೆ.
ಅಧಿವೇಶನದ ಬಳಿಕ ಶಾಸಕರನ್ನು ಅಮಾನತುಗೊಳಿಸುವುದು ಅಸಂವಿಧಾನಿಕ ಹಾಗೂ ಕಾನೂನುಬಾಹಿರ. ವಿಧಾನಸಭೆಯ ನಿರ್ಣಯ ಕಾನೂನು ಪ್ರಕಾರ ದುರುದ್ದೇಶಪೂರಕ ಎಂದಾಗುತ್ತದೆ. ಹೀಗಾಗಿ ಅಮಾನತು ಆದೇಶ ರದ್ದುಗೊಳಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಮಹಾರಾಷ್ಟ್ರ ವಿಧಾನಸಭಾಧ್ಯಕ್ಷ ಭಾಸ್ಕರ್ ಜಾಧವ್ ಅವರ ಚೇಂಬರ್ ನಲ್ಲಿ ಬಿಜೆಪಿ ಶಾಸಕರಾದ ಸಂಜಯ್ ಕುಟೆ, ಆಶಿಶ್ ಶೆಲಾರ್, ಅಭಿಮನ್ಯು ಪವಾರ್, ಗಿರೀಶ್ ಮಹಾಜನ್, ಅತುಲ್ ಭಟ್ಕಾಲ್ಕರ್, ಪರಾಗ್ ಅಲವಾನಿ ಸೇರಿದಂತೆ 12 ಶಾಸಕರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮಹಾರಾಷ್ಟ್ರ ಸರ್ಕಾರ ಆರೋಪಿಸಿತ್ತು. ಜುಲೈ 5ರಂದು ವಿಧಾನಸಭೆಯಿಂದ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿತ್ತು