ಮಹತ್ವದ ಬೆಳವಣಿಗೆಯೊಂದರಲ್ಲಿ ಮೊಬೈಲ್ ತಯಾರಿಕಾ ಕಂಪನಿಗಳು 10,000 ರೂಪಾಯಿಗಳಿಗಿಂತ ಮೇಲ್ಪಟ್ಟ 4 ಜಿ ಸ್ಮಾರ್ಟ್ ಫೋನ್ ಉತ್ಪಾದನೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಿವೆ. ಬುಧವಾರದಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಕಂಪನಿಗಳ ಪ್ರತಿನಿಧಿಗಳು ಸಭೆ ನಡೆಸಿದ ಬಳಿಕ ಈ ತೀರ್ಮಾನ ಹೊರ ಬಿದ್ದಿದೆ.
ಪ್ರಸ್ತುತ ದೇಶದಲ್ಲಿ 5ಜಿ ತರಂಗಾಂತರ ಸೇವೆ ಆರಂಭವಾಗಿದ್ದು, ಹೀಗಾಗಿ 5 ಜಿ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್ ಫೋನ್ ಗಳ ಉತ್ಪಾದನೆಗೆ ಒತ್ತು ನೀಡಲು ಮೊಬೈಲ್ ತಯಾರಿಕಾ ಕಂಪನಿಗಳು ನಿರ್ಧರಿಸಿವೆ. ಬುಧವಾರದ ಸಭೆಯಲ್ಲಿ ಸರ್ಕಾರದ ಪರವಾಗಿ ಟೆಲಿ ಕಮ್ಯುನಿಕೇಷನ್ ಇಲಾಖೆ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮೊಬೈಲ್ ತಯಾರಿಕಾ ಕಂಪನಿಗಳು ಮುಂದಿನ ದಿನಗಳಲ್ಲಿ ಉತ್ಪಾದಿಸುವ ಸ್ಮಾರ್ಟ್ ಫೋನ್ ಗಳು 10,000 ರೂಪಾಯಿ ಅಥವಾ ಅದಕ್ಕಿಂತ ಮೇಲ್ಪಟ್ಟ ದರದಲ್ಲಿ ಲಭ್ಯವಾಗುತ್ತವೆ. ಮೂಲಗಳ ಪ್ರಕಾರ ಭಾರತದಲ್ಲಿ ನೂರು ಮಿಲಿಯನ್ ಗ್ರಾಹಕರ ಬಳಿ 5 ಜಿ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್ ಫೋನ್ ಗಳು ಇದೆ ಎಂದು ಹೇಳಲಾಗಿದೆ.
ಇನ್ನು 350 ಮಿಲಿಯನ್ ಗ್ರಾಹಕರ ಬಳಿ 3 ಜಿ ಅಥವಾ 4 ಜಿ ತಂತ್ರಜ್ಞಾನ ಹೊಂದಿರುವ ಮೊಬೈಲ್ ಗಳಿದ್ದು ಇವರುಗಳನ್ನು ಹಂತ ಹಂತವಾಗಿ 5ಜಿ ವ್ಯಾಪ್ತಿಗೆ ತರುವ ಉದ್ದೇಶವನ್ನು ಹೊಂದಲಾಗಿದೆ. 5ಜಿ ತಂತ್ರಜ್ಞಾನ ಪ್ರಸ್ತುತ ಬೆಂಗಳೂರು ಸೇರಿದಂತೆ ದೇಶದ ಎಂಟು ನಗರಗಳಲ್ಲಿ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇದನ್ನು ವಿಸ್ತರಿಸಲಾಗುತ್ತದೆ.