ನೂರು ರೂಪಾಯಿ ಡಿಜಿಟಲ್ ವಹಿವಾಟಿನ ಬೆನ್ನು ಹತ್ತಿದ ದೆಹಲಿ ಪೊಲೀಸರು 4 ಕೋಟಿ ರೂಪಾಯಿ ಬೆಲೆಬಾಳುವ ಆಭರಣ ದರೋಡೆ ಪ್ರಕರಣವನ್ನು ಬೇಧಿಸಿದ್ದಾರೆ. ನಾಲ್ವರು ಆರೋಪಿಗಳನ್ನು ಜೈಪುರದಲ್ಲಿ ಹೆಡೆಮುರಿ ಕಟ್ಟಿದ್ದಾರೆ.
ದೆಹಲಿಯ ಪಹಾಡ್‌ಗಂಜ್‌ನಲ್ಲಿ ಈ ವಂಚಕರು ಪೊಲೀಸರ ಸೋಗಿನಲ್ಲಿ ಇಬ್ಬರು ಕೊರಿಯರ್ ಕಂಪನಿಯ ಸಿಬ್ಬಂದಿಗಳನ್ನು ದೋಚಿದ್ದರು. ಕಣ್ಣಿಗೆ ಖಾರದ ಪುಡಿ ಎರಚಿ 4 ಕೋಟಿ ರೂಪಾಯಿ ಬೆಲೆಬಾಳುವ ಆಭರಣ ಕಸಿದುಕೊಂಡು ಪರಾರಿಯಾಗಿದ್ದರು.
ಬೆಳಗಿನ ಜಾವ 4.49ರ ವೇಳೆಗೆ ಈ ದರೋಡೆ ನಡೆದಿತ್ತು. ಚಂಡೀಗಢ ಮತ್ತು ಲುಧಿಯಾನಾಕ್ಕೆ ಕಳುಹಿಸಬೇಕಾಗಿದ್ದ ದುಬಾರಿ ವಸ್ತುಗಳನ್ನು ಕಂಪನಿಯ ಎಕ್ಸಿಕ್ಯೂಟಿವ್‌ಗಳೇ ಡೆಲಿವರಿ ಮಾಡಲು ಹೊರಟಿದ್ದರು. ಈ ಸಂದರ್ಭದಲ್ಲಿ ದರೋಡೆಕೋರರು ದಾಳಿ ಮಾಡಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿದ್ದ 200 ಸಿಸಿ ಟಿವಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ರು. ಸುಮಾರು 15 ದಿನಗಳ ಕಾಲ ಇಂಚಿಂಚು ಸುಳಿವನ್ನೂ ಬಿಡದೇ ಹುಡುಕಾಡಿದ್ದಾರೆ. ಅಲ್ಲಿ ಟೀ ಕುಡಿದಿದ್ದ ದರೋಡೆಕೋರರು, ಹಣ ಪಾವತಿಸಲು ಕ್ಯಾಬ್ ಚಾಲಕನ ಬಳಿ ಕ್ಯಾಶ್ ಪಡೆದಿದ್ದರು. ನಂತರ ಆತನಿಗೆ ಪೇಟಿಎಂ ಮೂಲಕ 100 ರೂಪಾಯಿ ವರ್ಗಾಯಿಸಿದ್ದರು.
ಪೇಟಿಎಂ ಮುಖ್ಯ ಕಚೇರಿಗೆ ತರಳಿ ಅಲ್ಲಿ ಪರಿಶೀಲಿಸಿದ ಪೊಲೀಸರಿಗೆ ಓರ್ವ ಆರೋಪಿಯ ಫೋನ್ ನಂಬರ್ ಸಿಕ್ಕಿತ್ತು. ಆದ್ರೆ ಪೊಲೀಸರು ಬರುವಷ್ಟರಲ್ಲಿ ಆತ ಸಹಚರರೊಂದಿಗೆ ಜೈಪುರಕ್ಕೆ ಪರಾರಿಯಾಗಿದ್ದ. ಜೈಪುರಕ್ಕೆ ತೆರಳಿದ ಪೊಲೀಸರು ಅಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.