ದಾವಣಗೆರೆ: ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರನ್ನು ಒಲಿಸಿಕೊಳ್ಳಲು ರಾಜಕೀಯ ನಾಯಕರು ದಿನಕ್ಕೊಂದು ನಾಟಕ ಮಾಡುವುದು ಸಾಮಾನ್ಯ. ಕೋವಿಡ್ ಸಂತ್ರಸ್ತರಿಗೆ 10 ಸಾವಿರ ಹಣ ನೀಡುತ್ತೇನೆ. ಮನೆಯವರೆಲ್ಲರೂ ಚುನಾವಣೆಯಲ್ಲಿ ನನಗೆ ವೋಟ್ ಹಾಕಬೇಕು ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಾಕೀತು ಮಾಡಿರುವ ವಿಡಿಯೋ, ಆಡಿಯೋ ವೈರಲ್ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ.
ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ 1 ಲಕ್ಷ ಪರಿಹಾರ ನೀಡುತ್ತಿದೆ. ನಾನು ವೈಯಕ್ತಿಕವಾಗಿ 10 ಸಾವಿರ ಹಣ ನೀಡುತ್ತೇನೆ. ಮುಂದಿನ ಚುನಾವಣೆಯಲ್ಲಿ ವೋಟ್ ನನಗೆ ಹಾಕಬೇಕು ಎಂದು ಕೋವಿಡ್ ಸಂತ್ರಸ್ತ ಕುಟುಂಬದವರನ್ನು ಮನೆಗೆ ಕರೆಸಿ, ಆಣೆ ಪ್ರಮಾಣ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ರೇಣುಕಾಚಾರ್ಯ ವಿರುದ್ಧ ಕೇಳಿಬಂದಿದೆ.
ಹತ್ತು ಸಾವಿರ ರೂಪಾಯಿ ಹಣ ನೀಡುತ್ತಿದ್ದೇನೆ. ಚುನಾವಣೆಯಲ್ಲಿ ನನಗೆ ವೋಟ್ ಹಾಕಬೇಕು ಎಂದು ರೇಣುಕಾಚಾರ್ಯ ಆಣೆ, ಪ್ರಮಾಣ ಮಾಡಿಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೇ ಊರಿಗೆ ಹೋಗಿ ಎಲ್ಲರೂ ರೇಣುಕಾಚಾರ್ಯಗೆ ವೋಟ್ ಹಾಕಬೇಕು ಎಂದು ಪ್ರಚಾರ ಮಾಡುವಂತೆಯೂ ಸೂಚಿಸಿದ್ದಾರೆ.
ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿಯಿರುವಾಗಲೇ ಕುರುಡು ಕಾಂಚಾಣದ ಆಟ ಈಗಿನಿಂದಲೇ ಆರಂಭವಾಗಿದ್ದು, ಮುಂದೆ ಮನಿ ಪಾಲಿಟಿಕ್ಸ್ ಯಾವ ಮಟ್ಟಕ್ಕೆ ತಲುಪಲಿದೆ ಎಂಬುದನ್ನು ಕಾದುನೋಡಬೇಕಿದೆ.