ಬೆಂಗಳೂರು: ಆಹಾರ ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ವಿಧಿವಶರಾಗಿದ್ದು, ಸ್ವಲ್ಪ ಸಮಯದ ಮೊದಲು ಆಸ್ಪತ್ರೆಗೆ ಸಚಿವರು ಬಂದಿದ್ದರೆ ಅವರ ಜೀವ ಉಳಿಸಬಹುದಿತ್ತು ಎಂದು ಎಂ.ಎಸ್.ರಾಮಯ್ಯ ಆಸ್ಪತ್ರೆ ನಿರ್ದೇಶಕ ಡಾ.ಗುರುದೇವ್ ತಿಳಿಸಿದ್ದಾರೆ.
ನಿನ್ನೆ ರಾತ್ರಿ 10:30ರ ಸುಮಾರಿಗೆ ಬಾತ್ ರೂಮಿಗೆ ಹೋಗಿದ್ದ ಸಚಿವ ಉಮೇಶ್ ಕತ್ತಿ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡು ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ಬರುವ ಮೊದಲೇ ಸಚಿವರು ಕೊನೆಯುಸಿರೆಳೆದಿದ್ದರು.
ಈ ಬಗ್ಗೆ ಡಾ.ಗುರುದೇವ್ ಮಾಹಿತಿ ನೀಡಿದ್ದು, ಸಚಿವರನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ತಡವಾಗಿದೆ. 15 ನಿಮಿಷ ಆದ ಬಳಿಕ ಕರೆತರಲಾಗಿದೆ. ಒಂದು ವೇಳೆ ಮನೆಯಲಿಯೇ ಸಿಪಿಆರ್ ಮಾಡಿದ್ದರೂ ಸಚಿವರ ಜೀವ ಉಳಿಸಬಹುದಿತ್ತು. ಸಚಿವರು ಬಾತ್ ರೂಮ್ ನಲ್ಲಿ ಕುಸಿದು ಬಿದಿದ್ದಿದ್ದಾರೆ. ಮನೆಕೆಲಸದವರಿಗೆ ಗೊತ್ತಾಗಿ ಆಸ್ಪತ್ರೆಗೆ ಬರುವಷ್ಟರಲ್ಲೇ 15 ನಿಮಿಷ ತಡವಾಗಿತ್ತು. ತುರ್ತು ತಪಾಸಣೆ ನಡೆಸಿದಾಗ ಹಾರ್ಟ್ ಯಾವುದೇ ಕೆಲಸ ಮಾಡುತ್ತಿರಲಿಲ್ಲ ಎಂದರು.
ಆದರೂ ಸಚಿವರ ಜೀವ ರಕ್ಷಣೆಗಾಗಿ 7 ಬಾರಿ ಸಿಪಿಆರ್ ಮಾಡಿದ್ದೇವೆ. ಆದರೂ ಅವರ ಹೃದಯ ಕೆಲಸ ಮಾಡಿಲ್ಲ. ಹಾಗಾಗಿ ರಾತ್ರಿ 11:30ರ ಸುಮಾರಿಗೆ ಸಚಿವರು ನಿಧರಾಗಿದ್ದಾರೆ ಎಂದು ನಾವು ಘೋಷಿಸಿದೆವು. ಸಾಮಾನ್ಯವಾಗಿ ಸಿಪಿಆರ್ ಮಾಡಿ 10 ನಿಮಿಷದೊಳಗೆ ಆಸ್ಪತ್ರೆಗೆ ಬಂದಿದ್ದರೆ ಮುಂದಿನ ಎಲ್ಲಾ ವ್ಯವಸ್ಥೆ ಮಾಡಬಹುದಿತ್ತು ಎಂದು ತಿಳಿಸಿದ್ದಾರೆ.