ಬೆಂಗಳೂರು: ಬಿಎಂಟಿಸಿ ಕಂಡಕ್ಟರ್ ಓರ್ವರು ಪ್ರಯಾಣಿಕನಿಗೆ ಚಿಲ್ಲರೆ 1 ರೂಪಾಯಿ ನೀಡದ ಕಾರಣಕ್ಕೆ ಗ್ರಾಹಕರ ನ್ಯಾಯಾಲಯ ಬಿಎಂಟಿಸಿ ಇಲಾಖೆಗೆ ಪರಿಹಾರ ರೂಪದಲ್ಲಿ ಪ್ರಯಾಣಿಕನಿಗೆ 3000 ರೂಪಾಯಿ ನೀಡುವಂತೆ ಸೂಚಿಸಿದೆ.
ಕಂಡಕ್ಟರ್ 1 ರೂಪಾಯಿ ಚಿಲ್ಲರೆ ಹಣ ನೀಡದಿದ್ದಕ್ಕೆ ರಮೇಶ್ ನಾಯಕ್ ಎಂಬುವವರು ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ನ್ಯಾಯಾಲಯ ಪ್ರಯಾಣಿಕನಿಗೆ ಉಳಿದ 1ರೂಪಾಯಿ ಜೊತೆಗೆ ಪರಿಹಾರವಾಗಿ 3000 ರೂಪಾಯಿಯನ್ನು 45 ದಿನಗಳ ಒಳಗೆ ಪಾವತಿ ಮಾಡುವಂತೆ ಸೂಚಿಸಿದೆ.
2019ರಲ್ಲಿ ನಡೆದಿದ್ದ ಪ್ರಕರಣ ಇದಾಗಿದ್ದು, ಅಂದು ರಮೇಶ್ ನಾಯಕ್ ಶಾಂತಿನಗರದಿಂದ ಮೆಜೆಸ್ಟಿಕ್ ಬಸ್ ಡಿಪೋಗೆ ಪ್ರಯಾಣಿಸುತ್ತಿದ್ದರು. ಟಿಕೆಟ್ ದರ 29ರೂ. ಇದ್ದು ರಮೇಶ್ ನಾಯಕ್ 30 ರೂಪಾಯಿ ಕೊಟ್ಟಿದ್ದರು. ಆದರೆ ಕಂಡಕ್ಟರ್ 1 ರೂಪಾಯಿ ಚಿಲ್ಲರೇ ವಾಪಸ್ ಕೊಟ್ಟಿರಲಿಲ್ಲ. ಇದನ್ನು ಕೇಳಿದಾಗ ಬಿಎಂಟಿಸಿ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರು. ಇದರಿಂದ ನೊಂದ ರಮೇಶ್ 15,000 ರುಪಾಯಿ ಪರಿಹಾರ ಕೋರಿ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈಗ ಮೂರು ವರ್ಷಗಳ ನಂತರ ನ್ಯಾಯಾಲಯ ರಮೇಶ್ ಪರ ಆದೇಶ ಹೊರಡಿಸಿದೆ.