ಶಿವಮೊಗ್ಗ ನಗರದಲ್ಲಿ ನಿನ್ನೆ ನಡೆದ ಗಲಾಟೆ ನಂತರ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಶಾಲಾ – ಕಾಲೇಜುಗಳಿಗೂ ರಜೆ ನೀಡಲಾಗಿದ್ದು, ಮದ್ಯ ಮಾರಾಟ ನಿಷೇಧಿಸಲಾಗಿದೆ.
ನಿಷೇಧಾಜ್ಞೆ ಜಾರಿಗೊಳಿಸಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿರುವುದರಿಂದ ನಗರದಲ್ಲಿ ಜನ ಹಾಗೂ ವಾಹನ ಸಂಚಾರ ವಿರಳವಾಗಿತ್ತು. ನಗರದ ಪ್ರಮುಖ ವಹಿವಾಟು ಕೇಂದ್ರಗಳಾದ ಗಾಂಧಿ ಬಜಾರ್, ಬಿ.ಎಚ್. ರಸ್ತೆ, ನೆಹರು ರಸ್ತೆ, ದುರ್ಗಿಗುಡಿ ಸೇರಿದಂತೆ ಬಹುತೇಕ ಭಾಗದಲ್ಲಿ ಸಂಪೂರ್ಣ ಬಂದ್ ಮಾಡಲಾಗಿತ್ತು.
ಬಸ್ ಹಾಗೂ ವಾಹನಗಳ ಸಂಚಾರ ವಿರಳವಾಗಿದ್ದು, ಹೊರಗಿನಿಂದ ನಗರಕ್ಕೆ ಆಗಮಿಸುವ ವಾಹನಗಳ ತಪಾಸಣೆ ನಡೆಸಲಾಯಿತು. ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ ಕೈಗೊಳ್ಳಲಾಗಿದೆ. ಭಾರಿ ಸಂಖ್ಯೆಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಿದ್ದು ಸೂಕ್ಷ್ಮ ಪ್ರದೇಶಗಳಲ್ಲಿ ರಕ್ಷಣಾ ಸಿಬ್ಬಂದಿ ಪಥಸಂಚಲನ ನಡೆಸಿದ್ದಾರೆ. ಎಡಿಜಿಪಿ ಅಲೋಕ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಆದೇಶದ ಮೇರೆಗೆ ಸೆಕ್ಷನ್ 144 ಜಾರಿಯಿರುವ ಹಿನ್ನಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್ ನೇತೃತ್ವದಲ್ಲಿ ಶಿವಮೊಗ್ಗ ನಗರ ಹಾಗೂ ಭದ್ರಾವತಿ ನಗರ ವ್ಯಾಪ್ತಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಶಿವಮೊಗ್ಗ ಉಪವಿಭಾಗ, ಶಿವಮೊಗ್ಗ ವಲಯ 1 ಮತ್ತು 2, ಜಿಲ್ಲಾ ವಿಚಕ್ಷಣ ದಳ, ಭದ್ರಾವತಿ ವಲಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಶಿವಮೊಗ್ಗ, ಭದ್ರಾವತಿ ನಗರ ವ್ಯಾಪ್ತಿಯ ಎಲ್ಲಾ ತರಹದ ಸನ್ನದು ಮುಚ್ಚಿರುವುದನ್ನು ಪರಿಶೀಲನೆ ನಡೆಸಿದ್ದಾರೆ.