
ಲಿಂಗ ಸಮಾನತೆ ಹೆಚ್ಚುತ್ತಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಎಂಬಂತೆ ಓಡಿಶಾದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುತ್ತಿರುವ ಮಹಿಳೆಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಓಡಿಶಾದಲ್ಲಿ ಡಿಎಲ್ ಪಡೆಯುತ್ತಿರುವ ಮಹಿಳೆಯರಲ್ಲಿ 33 ಪ್ರತಿಶತ ಏರಿಕೆ ಕಂಡಿದೆ ಎಂದು ವರದಿಯಾಗಿದೆ. ಒಡಿಶಾದಲ್ಲಿ ಕಳೆದ ಐದು ವರ್ಷಗಳಲ್ಲಿ ಮಹಿಳಾ ಚಾಲಕರ ಸಂಖ್ಯೆಯು 33 ಪ್ರತಿಶತ ಏರಿಕೆ ಕಂಡಿದೆ. 2017ರಲ್ಲಿ ರಾಜ್ಯದಲ್ಲಿ 25086 ಮಂದಿ ಮಹಿಳೆಯರು ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರು. 2021ರ ವೇಳೆಗೆ ಈ ಸಂಖ್ಯೆಯು 33,666ಕ್ಕೆ ಏರಿಕೆ ಕಂಡಿದೆ ಎಂದು ರಾಜ್ಯ ಸಾರಿಗೆ ಪ್ರಾಧಿಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಾಹನ ಚಲಾಯಿಸುವುದರಿಂದ ಮಹಿಳೆಯರು ಹಿಂದೆ ಸರಿಯುವುದು ಈಗ ಹಳೆಯ ಸಂಗತಿಯಾಗಿದೆ. ಇದೀಗ ವಿದ್ಯಾರ್ಥಿನಿಯರು, ವೃತ್ತಿಪರ ಮಹಿಳೆಯರು ಹಾಗೂ ಗೃಹಿಣಿಯರು ತಮ್ಮ ಅನುಕೂಲಕ್ಕಾಗಿ ವಾಹನ ಚಾಲನೆಯನ್ನು ಕಲಿತುಕೊಳ್ಳುತ್ತಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ವಾಹನ ಚಲಾಯಿಸುವ ಮಹಿಳೆಯರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದ್ದರೂ ಸಹ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಓಡಿಶಾದ ಈ ಸಂಖ್ಯೆಯು ಹೆಚ್ಚು ಉತ್ತೇಜನಕಾರಿಯಾಗಿಲ್ಲ ಎಂದು ರಸ್ತೆ ಸುರಕ್ಷತೆಯ ಜಂಟಿ ಆಯುಕ್ತ ಸಂಜಯ್ ಬಿಸ್ವಾಲ್ ಹೇಳಿದರು.