ನೂತನವಾಗಿ ಶಾಲೆ ಆರಂಭಿಸುವವರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಯಾವುದೇ ಭಾಷಾ ಮಾಧ್ಯಮದ ಹೊಸ ಶಾಲೆಗಳನ್ನು ಆರಂಭಿಸಲು ಅನುಮತಿ ನೀಡುವ ಅಧಿಕಾರವನ್ನು ಈಗ ಆಯಾ ಜಿಲ್ಲೆಗಳ ಉಪನಿರ್ದೇಶಕರಿಗೆ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.
ಈ ಮೊದಲು ಪ್ರೌಢಶಾಲಾ ತರಗತಿಗಳು ಹಾಗೂ ಕನ್ನಡ ಮಾಧ್ಯಮ ಹೊರತುಪಡಿಸಿ ಇತರ ಮಾಧ್ಯಮಗಳಲ್ಲಿ ಯಾವುದೇ ಶಾಲಾ ಆರಂಭಿಸಬೇಕಿದ್ದರೂ ಸಹ ಶಿಕ್ಷಣ ಇಲಾಖೆಯ ಆಯುಕ್ತರ ಅನುಮತಿ ಬೇಕಿದ್ದು, ಇದರಿಂದ ವಿಳಂಬವಾಗುತ್ತಿತ್ತಲ್ಲದೆ ಭ್ರಷ್ಟಾಚಾರಕ್ಕೆ ಆಸ್ಪದವಾಗಿದೆ ಎಂದು ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಆರೋಪಿಸಿತ್ತು.
ಇದೀಗ ಕರ್ನಾಟಕ ಶಿಕ್ಷಣ ಸಂಸ್ಥೆಗಳ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು ಅದರ ಅನ್ವಯ, ಪೂರ್ವ ಪ್ರಾಥಮಿಕ ಶಾಲೆಗಳಿಗೆ ಈ ಮೊದಲಿನಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ 1ರಿಂದ 10ನೇ ತರಗತಿವರೆಗಿನ ಯಾವುದೇ ಭಾಷಾ ಮಾಧ್ಯಮದ ಹೊಸ ಶಾಲೆಗಳನ್ನು ಆರಂಭಿಸಲು ಡಿಡಿಪಿಐ ಅನುಮತಿ ನೀಡಲಿದ್ದಾರೆ.