ಬೆಂಗಳೂರು: ಶಿಕ್ಷಣ ಇಲಾಖೆ ಜಾರಿಗೆ ತರಲು ಹೊರಟಿರುವ ಯೋಜನೆಗಳು ಒಂದರ ಹಿಂದೊಂದರಂತೆ ವಿವಾದಕ್ಕೆ ಕಾರಣವಾಗುತ್ತಿದೆ. ಪಠ್ಯಪುಸ್ತಕ ಪರಿಷ್ಕರಣೆ, ಭಗವದ್ಗೀತೆ, ಹಿಜಾಬ್ ಗೆ ಅವಕಾಶ ನಿರಾಕರಣೆ, ಶಾಲಾ-ಕಾಲೇಜಿನ ಧ್ಯಾನ ಕಡ್ಡಾಯ ಯೋಜನೆಗಳು ಭಾರಿ ವಿರೋಧಕ್ಕೆ ಕಾರಣವಾಗಿದ್ದು ಇದೀಗ ವಿವೇಕ ಶಾಲೆಗಳ ಬಗ್ಗೆಯೂ ಆಕ್ರೋಶ ವ್ಯಕ್ತವಾಗುತ್ತಿದೆ.
ಶಿಕ್ಷಣ ಇಲಾಖೆ ರಾಜ್ಯಾದ್ಯಂತ ನಿರ್ಮಿಸಲು ಹೊರಟಿರುವ 7000ಕ್ಕೂ ಅಧಿಕ ಶಾಲಾ ಕಾಲೇಜು ಕೊಠಡಿಗಳಿಗೆ ಸ್ವಾಮಿ ವಿವೇಕಾನಂದರ ನೆನಪಿನಾರ್ಥವಾಗಿ ವಿವೇಕ ಶಾಲೆ ಹೆಸರಿಡಲು ಮುಂದಾಗಿರುವುದು ವಿರೋಧಕ್ಕೆ ಕಾರಣವಾಗಿದೆ. ಅಲ್ಲದೇ ಕೊಠಡಿಗಳಿಗೆ ವಿವೇಕಾನಂದರ ಉಡುಗೆಯ ಕೇಸರಿ ಬಣ್ಣವನ್ನೇ ಏಕರೂಪವಾಗಿ ಬಳಸಲು ಮುಂದಾಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಶಿಕ್ಷಣದಲ್ಲಿ ಕೇಸರಿಕರಣ ಮಾಡಲು ಹೊರಟಿರುವ ರಾಜ್ಯ ಬಿಜೆಪಿ ಸರ್ಕಾರದ ಕ್ರಮ ಸೂಕ್ತವಲ್ಲ. ಶಾಲಾ-ಮಕ್ಕಳಲ್ಲಿಯೇ ಧರ್ಮ ಸಂಘರ್ಷಗಳನ್ನು ಹುಟ್ಟುಹಾಕುತ್ತಿರುವುದು ವಿರೋಧಾಭಾಸವಾಗಿದೆ ಎಂದು ಹಲವು ಮುಖಂದರು ಕಿಡಿಕಾರಿದ್ದಾರೆ. ಶಿಕ್ಷಣ ಇಲಾಖೆಯ ವಿವೇಕ ಶಾಲೆ ಯೋಜನೆ ಬಗ್ಗೆ ಚಿಂತಕರು ಹಾಗೂ ಮುಸ್ಲಿಂ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.