ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ತಮ್ಮ ಹೊಸ ರಾಷ್ಟ್ರೀಯ ಪಕ್ಷ-ಭಾರತ ರಾಷ್ಟ್ರ ಸಮಿತಿ ಘೋಷಿಸಿದ್ದು, ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ನ 20 ಶಾಸಕರು ಸಾಥ್ ನೀಡಿದ್ದಾರೆ.
ಟಿ ಆರ್ ಎಸ್ ಪಕ್ಷವನ್ನೇ ಭಾರತ್ ರಾಷ್ಟ್ರ ಸಮಿತಿ-ಬಿ ಆರ್ ಎಸ್ ಎಂದು ರಾಷ್ಟ್ರೀಯ ಪಕ್ಷವಾಗಿ ಮರುನಾಮಕರಣ ಮಾಡಿದ್ದು, ತೆಲಂಗಾಣ ಭವನದಲ್ಲಿ ನಡೆದ ಸಭೆಯಲ್ಲಿ 280ಕ್ಕೂ ಹೆಚ್ಚು ಟಿ ಆರ್ ಎಸ್ ಪಕ್ಷದ ಪದಾಧಿಕಾರಿಗಳು, ಶಾಸಕರು, ಸಂಸದರ ಸಭೆಯಲ್ಲಿ ನೂತನ ಪಕ್ಷದೊಂದಿಗೆ ವಿಲೀನಗೊಳಿಸುವ ನಿರ್ಣಯ ಕೈಗೊಳ್ಳಲಾಯಿತು.
ವಿಜಯದಶಮಿ ದಿನವೇ ರಾಷ್ಟ್ರೀಯ ಪಕ್ಷಕ್ಕೆ ಕೆಸಿಆರ್ ಚಾಲನೆ ನೀಡಿದ್ದು, ಈ ಮೂಲಕ 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಎದುರಿಸಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ.
ಕೆಸಿಆರ್ ನೂತನ ಪಕ್ಷಕ್ಕೆ ಹೆಚ್.ಡಿ. ಕುಮಾರಸ್ವಾಮಿ ಜೆಡಿಎಸ್ ನ 20 ಶಾಸಕರೊಂದಿಗೆ ಬೆಂಬಲ ನೀಡಿದ್ದು, ಭಾರತ್ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ.