ಮಂಗಳೂರು: ಹೊಸ ಮನೆಯನ್ನು ಖರೀದಿಸಿ ಗೃಹಪ್ರವೇಶ ಮಾಡಿದ್ದ ಯುವತಿ ಅದೇ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳೂರು ಹೊರವಲಯದ ಕುಂಪಲ ಚಿಂತ್ರಾಂಜಲಿ ನಗರದಲ್ಲಿ ನಡೆದಿದೆ.
ಅಶ್ವಿನಿ ಬಂಗೇರ (25) ಆತ್ಮಹತ್ಯೆ ಮಾಡಿಕೊಂಡ ಯುವತಿ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಅಶ್ವಿನಿ ಒಂದುವರೆ ತಿಂಗಳ ಹಿಂದೆ ಊರಿಗೆ ಬಂದಿದ್ದರು. ಈ ವೇಳೆ ಕುಂಪಲದ ಚಿಂತ್ರಾಂಜಲಿ ನಗರದಲ್ಲಿ ಸಂಗೀತಾ ಎಂಬುವವರಿಂದ ಮನೆ ಖರೀದಿ ಮಾಡಿದ್ದರು. ಐದು ದಿನಗಳ ಹಿಂದೆ ಹೊಸ ಮನೆಯ ಗೃಹಪ್ರವೇಶ ನೆರವೇರಿಸಿ ತಾಯಿ ಹಾಗೂ ದೊಡ್ಡಮ್ಮನ ಇಬ್ಬರು ಗಂಡುಮಕ್ಕಳೊಂದಿಗೆ ಮನೆಯಲ್ಲಿ ವಾಸವಾಗಿದ್ದರು. ಈಗ ಏಕಾಏಕಿ ಮನೆಯ ರೂಮಿನಲ್ಲಿ ಅಶ್ವಿನಿ ನೇಣಿಗೆ ಕೊರಳೊಡ್ಡಿದ್ದಾರೆ.
ಸಾವಿಗೂ ಮುನ್ನ ಬರೆದಿಟ್ಟಿದ್ದ 24 ಪುಟಗಳ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಮನೆ ಖರೀದಿಸಿ ಮೋಸ ಹೋಗಿದ್ದಾಗಿ ಹಾಗೂ ಬ್ಯಾಂಕ್ ಅಧಿಕಾರಿಗಳು ಬಂದು ಪೀಡಿಸುತ್ತಿರುವುದಾಗಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ.