ಸಂಸ್ಥೆಯ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಲ್ಲಿ ಆಡಿಟ್ ಮಾಡಬೇಕಾದ ಹಿನ್ನೆಲೆಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳದಂತೆ ಪೇಟಿಎಂಗೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ.
ಐಟಿ ವ್ಯವಸ್ಥೆಯ ಸಮಗ್ರ ಲೆಕ್ಕಪರಿಶೋಧನೆ ನಡೆಸಲು ಆಡಿಟ್ ಸಂಸ್ಥೆಯನ್ನು ನೇಮಿಸುವಂತೆ ಬ್ಯಾಂಕ್ಗೆ ಸೂಚಿಸಲಾಗಿದೆ ಎಂದು ಆರ್.ಬಿ.ಐ. ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಬ್ಯಾಂಕಿಂಗ್ ರೆಗ್ಯೂಲೇಶನ್ ಆ್ಯಕ್ಟ್ 1949ರ ಸೆಕ್ಷನ್ 35 ಎ ಅಡಿಯಲ್ಲಿ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ವಿರುದ್ಧ ಕ್ರಮ ಎಂದು ಸುತ್ತೋಲೆಯನ್ನು ಆರ್.ಬಿ.ಐ. ತನ್ನ ಟ್ವಿಟರ್ನಲ್ಲಿ ಪ್ರಕಟಿಸಿದೆ.
ಐಟಿ ಲೆಕ್ಕ ಪರಿಶೋಧಕರ ವರದಿಯನ್ನು ಪರಿಶೀಲಿಸಿದ ನಂತರ ಆರ್.ಬಿ.ಐ.ನಿಂದ ನಿರ್ದಿಷ್ಟ ಅನುಮತಿಗೆ ಒಳಪಟ್ಟು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳಲು ಸಾಧ್ಯವಾಗುತ್ತದೆ.
ಪೇಟಿಎಂ 2017ರ ಮೇ 23ರಿಂದ ತನ್ನ ಕಾರ್ಯಾಚರಣೆಯನ್ನು ಆರಂಭಗೊಳಿಸಿತ್ತು. ಜೂನ್ ತಿಂಗಳಲ್ಲಿ ಸಣ್ಣ ಹಣಕಾಸು ಬ್ಯಾಂಕ್ ಪರವಾನಿಗೆಗೆ ಆರ್.ಬಿ.ಐ.ಗೆ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅರ್ಜಿ ಸಲ್ಲಿಸುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಆರ್.ಬಿ.ಐ. ಈ ಕ್ರಮವನ್ನು ಕೈಗೊಂಡಿದೆ.