ಬೆಂಗಳೂರು: ರಾಜ್ಯಸಭಾ ಚುನಾವಣೆ ಮತದಾನ ಅಂತ್ಯವಾಗಿದ್ದು, ನಾವು ಯಾವುದೇ ಶಾಸಕರನ್ನು ಹೈಜಾಕ್ ಮಾಡಿಲ್ಲ, ಅದರ ಅಗತ್ಯ ನಮಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಜೆಡಿಎಸ್ ಶಾಸಕರನ್ನು ಹೈಜಾಕ್ ಮಾಡಿದ್ದಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ನಮ್ಮ ಶಾಸಕರು ಪ್ರಾಮಾಣಿಕವಾಗಿ ಮತದಾನ ಮಾಡಿದ್ದಾರೆ. ನಮಗೆ ಯಾರನ್ನು ಹೈಜಾಕ್ ಮಾಡುವ ಅವಶ್ಯಕತೆ ಇಲ್ಲ. ಹೈಜಾಕ್ ಮಾಡಬೇಕು ಎಂದು ನಿರ್ಧರಿಸಿದ್ದರೆ 12 ಶಾಸಕರು ಇದ್ದರು. ಆದರೆ ನಾವು ಹಾಗೆ ಮಾಡಿಲ್ಲ. ನಮ್ಮ ಸ್ನೇಹಿತರಿಗೆ ನಾವು ಮುಜುಗರವಾಗುವಂತೆ ಮಾಡಲ್ಲ ಎಂದರು.
ಗೌಪ್ಯ ಮತದಾನದ ಬಗ್ಗೆ ನನಗೆ ಮಾತನಾಡುವ ಹಕ್ಕಿಲ್ಲ. ನಮ್ಮ ಪಕ್ಷದ 69 ಶಾಸಕರು ಮತಹಾಕಿರುವುದನ್ನು ನಾನು ನೋಡಿದ್ದೇನೆ. ಜೆಡಿಎಸ್ ನವರು ಕಾಂಗ್ರೆಸ್ ಗೆ ಮತ ಹಾಕಿದ್ದು ನನಗೆ ಗೊತ್ತಿಲ್ಲ. ಪಕ್ಷದ ಅಧ್ಯಕ್ಷನಾಗಿ, ಪಕ್ಷದ ಏಜೆಂಟ್ ಆಗಿ ನಾನು ಮತದಾನ ಮಾಡುವ ಸ್ಥಳದಲ್ಲಿ ಇದ್ದೆ. ಗೌಪ್ಯ ಮತದಾನದ ಬಗ್ಗೆ ನಾನು ಮಾತನಾಡುವಂತಿಲ್ಲ ಎಂದು ಹೇಳಿದರು.