ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹಿಗ್ಗ ಮುಗ್ಗ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಜನಬೆಂಬಲ ಇಲ್ಲ ಎಂದು ಅರಿತುಕೊಂಡ ಬಿಜೆಪಿ ಈಗ ‘ಜನಸ್ಪಂದನ’ಎಂದು ಹೆಸರು ಬದಲಿಸಿದೆಯಂತೆ! ಹೆಸರು ಬದಲಾದಾಕ್ಷಣ ಪರಿಸ್ಥಿತಿ ಬದಲಾಗುವುದೇ? ಎಂದು ಪ್ರಶ್ನಿಸಿದೆ.
ಮಳೆಯಲ್ಲಿ ಮುಳುಗಿದ ಜನರಿಗೆ ಸ್ಪಂದನೆ ತೋರದೆ ಇನ್ನೆಲ್ಲೋ ಬಸ್ಸು ಲಾರಿಗಳಲ್ಲಿ ಜನರನ್ನು ಕರೆತಂದು “ಜನಸ್ಪಂದನೆ” ಎನ್ನುವುದಕ್ಕಿಂತ ಹಾಸ್ಯಾಸ್ಪದವಾದುದು ಬೇರೆ ಇದೆಯೇ? ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಕಿಡಿಕಾರಿದೆ.
ರಾಜ್ಯದಲ್ಲಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು ಸಹಜಸ್ಥಿತಿಗೆ ಬರುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಬಿಬಿಎಂಪಿಯ ನಿರ್ಲಕ್ಷ್ಯದಿಂದ ಬೆಂಗಳೂರು ದ್ವೀಪವಾಗಿ ಮಾರ್ಪಟ್ಟಿದೆ. ಮಳೆ ಕಡಿಮೆಯಾದರೂ ನೆರೆ ಇನ್ನೂ ಹಾಗೆಯೇ ಇದೆ ತ್ವರಿತ ಗತಿಯ ಪರಿಹಾರ ಕಾರ್ಯಾಚರಣೆ ಕೈಗೊಳ್ಳದ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಬೇಜವಾಬ್ದಾರಿ ಸರ್ಕಾರವೇ ಈ ಅನಾಹುತಗಳಿಗೆ ನೇರ ಹೊಣೆ ಎಂದು ತರಾಟೆಗೆ ತೆಗೆದುಕೊಂಡಿದೆ.